ಸಚಿವ ಜಮೀರ್ ವಜಾಗೊಳಿಸಲು ಆಗ್ರಹ

Kdb_Demand
Published on

ಕಡಬ: ವಕ್ಫ್ ಆಸ್ತಿಯ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೀಡಲಾಗಿರುವ ನೋಟಿಸುಗಳನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ಹಾಗೂ ವಕ್ಫ್ ಅಕ್ರಮ ಹೆಸರಿನಡಿ ಬ್ಯಾನರ್ ಪ್ರದರ್ಶಿಸಿ ಬಿಜೆಪಿ ಸುಳ್ಯ ಮಂಡಲ ವತಿಯಿಂದ ಕಡಬ ಆಡಳಿತ ಸೌಧದ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಮುಖಂಡ ರಾಕೇಶ್ ರೈ ಕೆಡೆಂಜಿ, ಕಾಂಗ್ರೆಸ್ ಸರ್ಕಾರ ಪ್ರಜಾತಂತ್ರ ವಿರೋಧಿಯಾಗಿದ್ದು ರೈತರ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ನಮೂದಿಸುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ.

ರಾಜ್ಯದ ಅಭಿವೃದ್ಧಿಗೆ ಯೋಜನೆ ಹಾಕುವ ಬದಲಾಗಿ ವಿವಿಧ ರೀತಿಯಲ್ಲಿ ಹಿಂದು ಸಮಾಜವನ್ನು ದಮನಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹಿಂದು ಸಮಾಜ ಯೋಚನೆ ಮಾಡಬೇಕಾಗಿದೆ. ಸಚಿವ ಜಮೀರ್ ಅಹಮ್ಮದ್ ಸೂಚನೆ ಮೇರೆಗೆ ಅಧಿಕಾರಿಗಳು ವಕ್ಫ್ ಆಸ್ತಿಯೆಂದು ನಮೂದಿಸಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಸಚಿವ ಜಮೀರ್ ಅಹಮ್ಮದ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿದರು.

ಬಿಜೆಪಿ, ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಖಂಡ ಪ್ರದೀಪ್ ರೈ ಮನವಳಿಕೆ ಸ್ವಾಗತಿಸಿ ವಂದಿಸಿದರು. ಪ್ರತಿಭಟನೆ ಬಳಿಕ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net