ಬಜಕೂಡ್ಲು ಮಿನಿ ಸ್ಟೇಡಿಯಂ ಅಭಿವೃದ್ಧಿಗೆ ಆಗ್ರಹ : ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಮಾಲೋಚನಾ ಸಭೆ

New Project (47)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಬಜಕೂಡ್ಲು ಮಿನಿ ಸ್ಟೇಡಿಯಂನ ಅಭಿವೃದ್ಧಿ ಕಾಮಗಾರಿಗೂ ಮೊದಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಮಾಲೋಚನಾ ಸಭೆ ನಡೆಸಲಾಯಿತು.

ಬಜಕೂಡ್ಲು ಮಿನಿ ಸ್ಟೇಡಿಯಂ ಸೆವೆನ್ಸ್ ಕ್ರಿಕೆಟ್ ಪಂದ್ಯಾಟಕ್ಕೆ ಸೂಕ್ತವಾಗಿಲ್ಲ. ಹಲವಾರು ನ್ಯೂನತೆಗಳನ್ನು ಹೊಂದಿರುವ ಬಗ್ಗೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ಹೊಸ ನಿರ್ಮಾಣ ಕಾಮಗಾರಿಯಲ್ಲಿ ಇವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಲಾಯಿತು.

ಪಂದ್ಯಾಟ ನಡೆಯುವ ವೇಳೆ ಮೈದಾನಕ್ಕೆ ಆಗಮಿಸುವ ಆಟಗಾರರ ವಾಹನಗಳನ್ನು ನಿಲುಗಡೆಗೊಳಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ಜಾಗವಿಲ್ಲ. ರಸ್ತೆ ಬದಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಬಜಕೂಡ್ಲಿನ ಗೋಶಾಲೆ, ಪಳ್ಳಕ್ಕಾನ, ಅಣ್ಣಾರಮೂಲೆ ಭಾಗಕ್ಕೆ ತೆರಳುವವರಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿರುವುದರಿಂದ ಪಾರ್ಕಿಂಗ್‌ಗೆ ಜಾಗ ಕಂಡುಕೊಳ್ಳುವಂತೆ ಆಗ್ರಹಿಸಲಾಯಿತು.

ಈಗಾಗಲೇ ಮಿನಿ ಸ್ಟೇಡಿಯಂನಲ್ಲಿ ಶೌಚಗೃಹ ಹಾಗೂ ನೀರಿಗಾಗಿ ಕೊಳವೆಬಾವಿ ನಿರ್ಮಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಹಣ ಮೀಸಲಿರಿಸದೆ ಈ ಮೊತ್ತವನ್ನು ಬದಲಿ ಕಾಮಗಾರಿಗೆ ಬಳಸುವಂತೆ ಸೂಚಿಸಲಾಯಿತು. ಕ್ರಿಕೆಟ್ ಜತೆಗೆ ವಾಲಿಬಾಲ್, ಫುಟ್ಬಾಲ್ ಆಟಗಳಿಗೆ ಅಗತ್ಯವಿರುವ ಕಂಬಗಳ ಅಳವಡಿಕೆ, ಕಬಡ್ಡಿ ಆಟಕ್ಕೆ ಅನುಗುಣವಾದ ವ್ಯಾಟ್ ವ್ಯವಸ್ಥೆ, ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಜೆ.ಎಸ್.ಸೋಮಶೇಖರ್ ನೇತೃತ್ವದಲ್ಲಿ ಸಭೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net