ಈರುಳ್ಳಿ ಬೆಳೆಗೆ ಪರಿಹಾರ ನೀಡಲು ಆಗ್ರಹ

bkt-25-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ತಿಪ್ಪಣ್ಣ ಮೇಟಿ, ಉದಯಕುಮಾರ ಬಾಳಕ್ಕನವರ, ಹಣಮಂತ ದುರಗಣ್ಣವರ ಇದ್ದರು.
Published on

ಬಾಗಲಕೋಟೆ: ಸತತ ಮಳೆಯಿಂದ ಹಾಳಾಗಿರುವ ಈರುಳ್ಳಿ ಬೆಳೆಗೆ ಪರಿಹಾರ ನೀಡಬೇಕು ಇಲ್ಲದಿದ್ದರೆ ಸರ್ಕಾರ ಈರುಳ್ಳಿ ಬೆಳೆಗಾರರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಾದ್ಯಂತ ಹಲವಾರು ಭಾಗಗಳಲ್ಲಿ ೩೦ ಲಕ್ಷ ಈರುಳ್ಳಿ ಬೆಳೆಗಾರರು ಇದ್ದು, ದೇಶದಲ್ಲಿ ರಾಜ್ಯವು ಈರುಳ್ಳಿ ಬೆಳೆಯುವಲ್ಲಿ ೨ನೇ ಸ್ಥಾನದಲ್ಲಿದೆ. ಇತ್ತೀಚಿಗೆ ಮಳೆಯಾಗಿ ಜಿಲ್ಲೆಯಲ್ಲಿ ಬೆಳೆದಂತಹ ಈರುಳ್ಳಿ ಸಂಪೂರ್ಣವಾಗಿ ನಾಶವಾಗಿದೆ. ಸರ್ಕಾರ ತಕ್ಷಣ ಪರಿಹಾರ ರೈತರಿಗೆ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಸತತ ಮಳೆಯಾಗಿ ಈರುಳ್ಳಿ ಬೆಳೆದ ಜಮೀನಿನಲ್ಲಿ ಶೇಖರಣೆಯಾಗಿ ಈರುಳ್ಳಿ ನಾಶವಾಗಿದೆ. ರೈತರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈರುಳ್ಳಿ ಬೆಳೆಗಾರರ ಪರಿಸ್ಥಿತಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ. ಮಳೆಯಿಂದ ಪ್ರತಿ ಎಕರೆ ೫೦ ಸಾವಿರ ರೂ.ಗಳಷ್ಟು ನಷ್ಟವಾಗಿದೆ. ಸರ್ಕಾರ ಪ್ರತಿ ಎಕರೆಗೆ ಹಾನಿಯನ್ನು ಭರಿಸಲು ೫೦ ಸಾವಿರ ರೂ. ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಒಂದು ವೇಳೆ ಸರ್ಕಾರ ಈರುಳ್ಳಿ ಬೆಳೆಗಾರರಿಗೆ ಹಾನಿಯನ್ನು ತುಂಬಲು ಪರಿಹಾರ ನೀಡಲು ಮುಂದಾಗದಿದ್ದರೆ ಈರುಳ್ಳಿ ಬೆಳೆ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಹಾಳಾಗಿರುವ ರೈತರ ಬೆಳೆಯನ್ನು ಸರಿಯಾಗಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.

ಈರುಳ್ಳಿ ಬೆಳೆದ ರೈತರು ಬೆಳಗಾವಿಗೆ ತೆಗೆದುಕೊಂಡು ಹೋಗಬೇಕಾಗಿದೆ. ಸಾಗಾಣೆ ವೆಚ್ಚ ಎಲ್ಲವೂ ಹೆಚ್ಚಾಗಿದೆ. ಮುಧೋಳದಲ್ಲಿ ಬಂದ್ ಆಗಿರುವ ಲೋಕಾಪುರದ ಎಪಿಎಂಸಿಯಲ್ಲಿ ಈರುಳ್ಳಿಯನ್ನು ಖರೀದಿಸಲು ಆರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ತಿಪ್ಪಣ್ಣ ಮೇಟಿ, ಉದಯಕುಮಾರ ಬಾಳಕ್ಕನವರ, ಹಣಮಂತ ದುರಗಣ್ಣವರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net