ಹಾಡಿ ಶಾಲೆಗೆ ಸ್ವಂತ ಕಟ್ಟಡ ಕಲ್ಪಿಸಲು ಒತ್ತಾಯ

ಹಾಡಿ ಶಾಲೆಗೆ ಸ್ವಂತ ಕಟ್ಟಡ ಕಲ್ಪಿಸಲು ಒತ್ತಾಯ
Published on

ಎಚ್.ಡಿ.ಕೋಟೆ: ತಾಲೂಕಿನ ಆನೆಮಾಳ, ಗೋಳೂರು ಮತ್ತು ಬಳ್ಳೆ ಹಾಡಿಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಸ್ವಂತ ಕಟ್ಟಡವನ್ನು ನಿರ್ಮಿಸಿ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಭಾನುವಾರ ಎಐಡಿಎಸ್‌ಒ ನೇತೃತ್ವದಲ್ಲಿ ಮಕ್ಕಳ ಪಾಲಕರು ಪ್ರತಿಭಟನೆ ಮಾಡಿದರು.

ಹಾಡಿಗಳಲ್ಲಿ ಜನಗಳು ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಯಾವುದೇ ರೀತಿಯ ಮೂಲ ಸೌಲಭ್ಯವಿಲ್ಲದೆ ಮಣ್ಣಿನ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಶಾಸಕರು ಮತ್ತು ಸಂಸದರ ಮಕ್ಕಳು ಭವ್ಯವಾದ ಕಟ್ಟಡದ ಶಾಲೆಗಳಲ್ಲಿ ಓದುತ್ತಿದ್ದಾರೆ. ಆದರೆ, ಆದಿವಾಸಿಗಳ ಮಕ್ಕಳು ಕಟ್ಟಡವೇ ಇಲ್ಲದೆ ಪರದಾಡುವಂತಾಗಿದೆ. ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೀಗಿರುವಾಗ ಮಕ್ಕಳು ಬರುತ್ತಿಲ್ಲ ಎಂಬ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಖಂಡನೀಯ. ಹಿಂದುಳಿದ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಬೇಕೆಂದರೆ ಸರ್ಕಾರ ಈ ಕೂಡಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.

ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಚಂದ್ರಕಲಾ ಮಾತನಾಡಿ, ಎಚ್.ಡಿ ಕೋಟೆ ತಾಲೂಕಿನ ಆನೆಮಾಳ ಹಾಡಿಯಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಆರನೇ ತರಗತಿವರೆಗೆ 32 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಶಾಲೆಗೆ ಇರುವುದು ಒಂದೇ ಕಟ್ಟಡ, ಅಲ್ಲೇ ಅಡುಗೆ, ಅಲ್ಲೇ ಪಾಠ ಮತ್ತು ಶಿಕ್ಷಕರಿಗಾಗಿ ಪ್ರತ್ಯೇಕ ಕೊಠಡಿಯೇ ಇಲ್ಲವಾಗಿದೆ. ಎಲ್ಲ ಒಂದೇ ಕೊಠಡಿಯಲ್ಲಿ ನಡೆಯುತ್ತಿದೆ. ಹೀಗಾದರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಲು ಹೇಗೆ ಸಾಧ್ಯ? ಜತೆಗೆ ಶಾಲೆಯಲ್ಲಿ ಅವಶ್ಯಕ ಶಿಕ್ಷಕರು ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಮತ್ತು ಶೌಚಗೃಹ ಕೂಡ ಬಳಸುವ ರೀತಿಯಲ್ಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‌ಒ ಖಜಾಂಚಿ ಸುಭಾಷ್, ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷ ಸ್ವಾತಿ, ಪದಾಧಿಕಾರಿಗಳಾದ ಚೈತ್ರ ಚಂದನಾ, ಚಂದ್ರಿಕಾ, ಹೇಮಾ, ನಂದೀಶ್, ಅಭಿಷೇಕ್, ನಿಶಾಂತ್, ಆನೆಮಾಳ, ಗೋಳೂರು, ಬಳ್ಳೆ ಹಾಡಿಗಳ ನಿವಾಸಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net