

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಇಂದಬೆಟ್ಟು ಮತ್ತು ಮಿತ್ತಬಾಗಿಲು ಗ್ರಾಮವನ್ನು ಸಂಪರ್ಕಿಸುವ ಕೊಪ್ಪದ ಗುಂಡಿ ಎಂಬಲ್ಲಿ ನಿರ್ಮಿಸಲಾಗಿರುವ ಕಿಂಡಿ-ಅಣೆಕಟ್ಟು ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನದಿ ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.
ಇಂದಬೆಟ್ಟು ಮತ್ತು ಮಿತ್ತಬಾಗಿಲು ಗ್ರಾಮವನ್ನು ಸಂಪರ್ಕಿಸುವ ದಾರಿಯಾದ ಮಿತ್ತಬಾಗಿಲು ಗ್ರಾಮದ ಕೊಪ್ಪದಗುಂಡಿ ಎಂಬಲ್ಲಿ ಸುಮಾರು 25 ವರ್ಷಗಳ ಹಿಂದೆ ಅಂದಿನ ತಾಪಂ ಅಧ್ಯಕ್ಷರಾಗಿದ್ದ ಮುಕುಂದ ಸುವರ್ಣರ ಸತತ ಪ್ರಯತ್ನದಲ್ಲಿ ಆಗಿನ ಸಚಿವರಾಗಿದ್ದ ರಮಾನಾಥ ರೈ ಮೂಲಕ ಕಿಂಡಿಅಣೆಕಟ್ಟು ಮಂಜೂರುಗೊಂಡಿತ್ತು. ಆ ಸಂದರ್ಭ ಕಿಂಡಿಅಣೆಕಟ್ಟಿನ ಇಕ್ಕೆಲಗಳಲ್ಲಿ ಮಣ್ಣಿನ ರಸ್ತೆ ಇತ್ತು. ಈಗ ಈ ರಸ್ತೆಗಳು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಗೊಂಡಿದೆ.
ಇಂದಬೆಟ್ಟು ಕಿಲ್ಲೂರು ಕಡೆಯಿಂದ ಮಿತ್ತಬಾಗಿಲು, ಕಡಿರುದ್ಯಾವರ ಮೊದಲಾದ ಕಡೆಗಳಿಗೆ ಹೋಗಬೇಕಾದರೆ ಕೊಪ್ಪದಗಂಡಿ ಮೂಲಕ ಹತ್ತಿರದ ದಾರಿಯಾಗಿದೆ. ಇಲ್ಲವಾದರೆ ಕಿಲ್ಲೂರು ಮೂಲಕ ಸುಮಾರು ಐದು ಕಿ.ಮೀ ಸುತ್ತು ಬಳಸಿ ಹೋಗಬೇಕಾಗಿದೆ. ಕೊಂಪದಗಂಡಿಯ ಈ ಕಿಂಡಿಅಣೆಕಟ್ಟಿನ ಮೇಲೆ ಬೇಸಿಗೆ ಕಾಲದಲ್ಲಿ ವಾಹನಗಳಲ್ಲಿ ದಾಟಬಹುದು. ಆದರೆ ಮಳೆಗಾಲದಲ್ಲಿ ಪ್ರತಿ ವರ್ಷ ಮುಳುಗಡೆಯಾಗುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಸಂಚಾರಕ್ಕೆ ಇಲ್ಲಿ ಬಹಳಷ್ಟು ಸಮಸ್ಯೆ ಕಾಡುತ್ತಿದ್ದು, ಸುಸಜ್ಜಿತ ಸೇತುವೆಗಾಗಿ ಬೇಡಿಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಮುಳುಗಿದ ಸೇತುವೆಯಲ್ಲಿ ಹುಚ್ಚು ಸಾಹಸ!
ಕೆಲ ಯುವಕರು ನದಿಯಲ್ಲಿ ಪೂರ್ತಿ ಪ್ರವಾಹ ಇರುವಾಗಲೂ ಇಲ್ಲಿ ವಾಹನದಲ್ಲಿ ಹೋಗುವ ಹುಚ್ಚು ಸಾಹಸ ಮಾಡುತ್ತಿರುವುದು ಅಪಾಯಕಾರಿಯಾಗಿದೆ. ಕೊಪ್ಪದಂಗಡಿ ಎಂಬಲ್ಲಿ ಸೇತುವೆ ಬೇಕೆಂಬುದು ಈ ಪರಿಸರದ ಜನರ ಹಲವು ವರ್ಷಗಳ ಬೇಡಿಕೆ. ಆದರೆ ಇದು ಇಂದಿಗೂ ಈಡೇರಿಲ್ಲ, ಕಿಲ್ಲೂರು, ಇಂದಬೆಟ್ಟು ಸೇರಿದಂತೆ ವಿವಿಧ ಕಡೆಗಳಿಂದ ಮಿತ್ತಬಾಗಿಲು ಕಡೆಗೆ ಬರುವವರು ಕೊಂಪದಗಂಡಿಯ ಮೂಲಕವೇ ಬರುತ್ತಿದ್ದು, ಮಳೆಗಾಲದಲ್ಲಿ ಜನರ ಸಮಸ್ಯೆಗೆ ಕಾರಣವಾಗುವ ಕೊಂಪದಗುಂಡಿಗೆ ಸೇತುವೆಯೊಂದನ್ನು ಮಂಜೂರುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.