

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ಕಲಗುರ್ತಿ ಗ್ರಾಮದ ದೇವಾನಂದ ರಾಮಚಂದ್ರ ಕೋರಬಾ ಸಾವಿನ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕಲಬುರಗಿ ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ ಮತ್ತು ಯುವ ಕೋಲಿ ಸಮಾಜದ ಚಿತ್ತಾಪುರ ತಾಲೂಕು ಅಧ್ಯಕ್ಷ ಗುಂಡು ಐನಾಪುರ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಾನಂದ ಸಾವು ಕುರಿತು ಆ. ೨೦ರಂದು ಪ್ರಕರಣ ದಾಖಲಾಗಿದ್ದರೂ ಇದುವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ತನಿಖಾಧಿಕಾರಿಗಳನ್ನು ಬದಲಾಯಿಸಿ ಪ್ರಕರಣಕ್ಕೆ ಸಂಬAಧಪಟ್ಟ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ದೇವಾನಂದ ಸಾವಿಗೆ ಕಾರಣರಾದ ಆರೋಪಿತರ ಬಂಧಿಸಬೇಕು, ಮೃತನ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮ್ಯಾಕೇರಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜ ಸಪ್ಪಣಗೋಳ, ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ, ರಾಮಚಂದ್ರ ಕೋರಬಾ ಇತರರಿದ್ದರು.