ದೇಶದ್ರೋಹಿಗಳ ಮೇಲೆ ಕ್ರಮಕ್ಕೆ ಒತ್ತಾಯ

Demand action on traitors
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಶಿವರುದ್ರ ಬಾಗಲಕೋಟ ಪಾಕಿಸ್ತಾನ ಜಿಂದಾಬಾದ್ ಘೋಷಣೆ , ದೇಶದ್ರೋಹಿ ವಿರುದ್ಧ ಖಂಡನಾ ನಿರ್ಣಯ ಮಂಡಿಸುವಂತೆ ಪಟ್ಟು ಹಿಡಿದರು.
Published on

ವಿಜಯಪುರ: ವಿಧಾನ ಸೌಧದಲ್ಲಿ ಮೊಳಗಿದೆ ಎನ್ನಲಾದ ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯಲ್ಲಿಯೂ ಬಿಸಿ ಬಿಸಿ ಚರ್ಚೆ ನಡೆಯಿತು.

ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಆರಂಭದಲ್ಲಿಯೇ ಬಿಜೆಪಿ ಸದಸ್ಯ ಶಿವರುದ್ರ ಬಾಗಲಕೋಟ ವಿಷಯ ಪ್ರಸ್ತಾಪಿಸುತ್ತಾ, ರಾಜ್ಯದ ರಾಜಧಾನಿಯಲ್ಲಿರುವ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟಣೆ ಬಳಿಕ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿ ಬಂದಿದೆ. ಇದೊಂದು ಆಘಾತಕಾರಿ ಸಂಗತಿ. ಹೀಗಾಗಿ ಈ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇನ್ನೋರ್ವ ಬಿಜೆಪಿ ಸದಸ್ಯ ರಾಜಶೇಖರ ಮಗಿಮಠ ಮಾತನಾಡಿ, ದೇಶದಲ್ಲಿ ಇಂಥ ಆಘಾತಕಾರಿ ಹೇಳಿಕೆ ಕಂಡುಬರುತ್ತಿರುವುದು ಖಂಡನೀಯ. ಹೀಗಾಗಿ ಸಭೆಯ ಆರಂಭದಲ್ಲಿಯೇ ಮಹಾಪೌರರು ಖಂಡನಾ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಸದಸ್ಯೆ ಆರತಿ ಶಹಾಪುರ ಮಾತನಾಡಿ, ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಮೊಳಗಿರುವುದರ ಕುರಿತು ಇನ್ನೂ ಸ್ಪಷ್ಟತೆಯಿಲ್ಲ. ಈ ಬಗ್ಗೆ ತನಿಖೆ ಆಗಬೇಕು.

ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ. ಹೀಗಾಗಿ ಈಗಲೇ ನಿರ್ಣಯಕ್ಕೆ ಬರುವುದು ಸರಿಯಲ್ಲ ಎಂದರು.

ಕಾಂಗ್ರೆಸ್‌ನ ಇನ್ನುಳಿದ ಸದಸ್ಯರು ಸಹ ಆರತಿ ಶಹಾಪುರ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತಾ, ನಾವೆಲ್ಲ ಭಾರತೀಯರು. ಒಂದೇ ತಾಯಿ ಮಕ್ಕಳು. ಹೀಗಾಗಿ ಪಾಕ್ ಪರ ಘೋಷಣೆ ಸಹಿಸಲ್ಲ. ತನಿಖೆಯಲ್ಲಿರುವ ವಿಷಯದ ಚರ್ಚೆ ಬೇಡ ಎಂದರು.

ಆಗ ಬಿಜೆಪಿ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಸಮರ್ಥನೆ ಬೇಡ. ತನಿಖೆ ತ್ವರಿತವಾಗಿ ಕೈಗೊಳ್ಳಲಿ ಎಂಬುದು ನಮ್ಮ ಆಗ್ರಹ. ಆ ಬಗ್ಗೆಯೇ ನಿರ್ಣಯ ಆಗಲಿ. ತ್ವರಿತವಾಗಿ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕ್ರಮ ಆಗಲಿ ಎಂಬುದು ನಮ್ಮ ಬೇಡಿಕೆ ಎಂದರು.

ಗಣೇಶ ವಿಗ್ರಹ ಪ್ರತಿಷ್ಟಾಪಿಸಿ

ಮಹಾನಗರ ಪಾಲಿಕೆಯ ನೂತನ ಕಟ್ಟಡದಲ್ಲಿ ಗಣೇಶ ವಿಗ್ರಹ ಪ್ರತಿಷ್ಟಾಪಿಸಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.
ಸದಸ್ಯ ರಾಹುಲ್ ಜಾಧವ ವಿಷಯ ಪ್ರಸ್ತಾಪಿಸುತ್ತಾ, ಈಗಾಗಲೇ ಗಣೇಶ ವಿಗ್ರಹ ಪ್ರತಿಷ್ಟಾಪನೆಗೆ ಮನವಿ ಸಲ್ಲಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೀರಿ. ಹೀಗಾಗಿ ಕೂಡಲೇ ಗಣೇಶ ವಿಗ್ರಹ ಪ್ರತಿಷ್ಟಾಪಿಸಬೇಕೆಂದರು. ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ ಹಾಗೂ ಪ್ರೇಮಾನಂದ ಬಿರಾದಾರ, ಹಲವರು ಒತ್ತಾಯಿಸಿದರು. ವಿಗ್ನ ವಿನಾಶಕನ ಮೂರ್ತಿ ಪ್ರತಿಷ್ಟಾಪಿಸಲೇಬೇಕೆಂದು ಪಟ್ಟು ಹಿಡಿದರು. ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತ ಬದ್ರುದಿನ್ ಸೌದಾಗರ, ಕಾನೂನು ಪ್ರಕಾರ ನಡೆದುಕೊಳ್ಳಲಾಗುವುದು. ಮೂರ್ತಿ ಪ್ರತಿಷ್ಟಾಪನೆ ವಿಚಾರದಲ್ಲಿ ಕಾನೂನು ಏನು ಹೇಳುತ್ತದೋ ಆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net