ದರ್ಪ ಮೆರೆದ ಕ್ವಾರಿ ಮಾಲೀಕನ ವಿರುದ್ಧ ಕ್ರಮಕ್ಕೆ ಪಟ್ಟು

FotoJet (5)
Published on

 ಗೌರಿಬಿದನೂರಿನಲ್ಲಿ ರೈತರ ಪ್ರತಿಭಟನೆ | ಶಾಮೀಲಾಗಿರುವ ಅಧಿಕಾರಿಗಳ ವಜಾಕ್ಕೆ ಆಗ್ರಹ

 ಗೌರಿಬಿದನೂರು : ಕನಗಾನಕೊಪ್ಪದಲ್ಲಿ ರೈತರ ಮೇಲೆ ದರ್ಪ ಮೆರೆದು ಪಿಸ್ತೂಲಿನಿಂದ ಗುಂಡು ಹಾರಿಸಿದ ಗಣಿ ಮಾಲೀಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಆತನೊಂದಿಗೆ ಶಾಮೀಲಾಗಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ, ಪ್ರಜಾ ಸಂಘರ್ಷ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ತಾಲೂಕು ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕಲ್ಲು ಕ್ವಾರಿ ಮಾಲೀಕರು ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದು, ಅವರ ಕುಮ್ಮಕ್ಕಿನಿಂದ ರೈತರ ಮೇಲೆ ಪದೇಪದೆ ದೌರ್ಜನ್ಯ ನಡೆಯುತ್ತಿದೆ. ಈಗ ಗುಂಡಿಕ್ಕಿ ಕೊಲ್ಲುವ ಹಂತಕ್ಕೆ ದರ್ಪ ಮೆರೆದಿದ್ದಾನೆ. ದಾರಿ ಇಲ್ಲದ ಜಾಗದಲ್ಲಿ ಕ್ವಾರಿಗೆ ದಾರಿ ಮಾಡಿಕೊಡಲು ಆತನೊಂದಿಗೆ ಕೈಜೋಡಿಸಿರುವ ಉಪನಿರೀಕ್ಷಕ, ತಹಸೀಲ್ದಾರ್, ಕಂದಾಯ ನಿರೀಕ್ಷಕರನ್ನು ಕೆಲಸದಿಂದ ವಜಾ ಮಾಡಬೇಕು. ಗುಂಡೇಟಿನಿಂದ ಗಾಯಗೊಂಡಿರುವ ರೈತನಿಗೆ ಉಚಿತವಾಗಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸೂಕ್ತ ಪರಿಹಾರ ವಿತರಣೆ ಮಾಡಬೇಕು. ರೈತನ ಮೇಲೆ ಗುಂಡು ಹಾರಿಸಿದ ಕ್ವಾರಿ ಮಾಲೀಕ ಸಕಲೇಶ್ ಕುಮಾರ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಬೇಕು. ಗಡೀಪಾರು ಪ್ರಕರಣ ದಾಖಲಿಸಬೇಕು. ಶಾಶ್ವತವಾಗಿ ಅಲ್ಲಿನ ಕಲ್ಲು ಕ್ವಾರಿ ಪರವಾನಗಿ ರದ್ದು ಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆರ್.ಎನ್. ರಾಜು ಮಾತನಾಡಿ, ಆರೋಪಿ ಪ್ರಭಾವಿ ರಾಜಕಾರಣಿ ವೈ.ಎ. ನಾರಾಯಣಸ್ವಾಮಿ ಅವರ ಸೋದರ ಸಂಬಂಧಿ ಎನ್ನಲಾಗಿದ್ದು, ಆತನನ್ನು ರಕ್ಷಿಸುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಆತನ ವಿರುದ್ಧ ಮೃದು ದೋರಣೆ ತೋರಬಾರದು. ಯಾವುದೇ ಒತ್ತಡಗಳಿಗೆ ಮಣಿಯದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಮೂಲಕ ಸರ್ಕಾರ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ಬಾಬು, ನರಸಾರೆಡ್ಡಿ, ಶ್ರೀನಿವಾಸ್, ರಾಜಣ್ಣ, ನಂದನ್, ಆವುಲ ರೆಡ್ಡಿ, ಲಕ್ಷ್ಮೀನಾರಾಯಣ, ಶಶಿಕುಮಾರ್ ಮುಂತಾದವರು ಹಾಜರಿದ್ದರು.

ಎಲ್ಲೆ ಮೀರಿದ ವರ್ತನೆ

ರೈತ ಸಂಘದ ತಾಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್ ಗೌಡ ಮಾತನಾಡಿ, ಹಣ ಗಳಿಕೆ ಉದ್ದೇಶದಿಂದ ಪರಿಸರ ಹಾಳು ಮಾಡಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ರೈತರ ವಿಷಯದಲ್ಲಿ ಕ್ವಾರಿ ಮಾಲೀಕ ಎಲ್ಲೆ ಮೀರಿ ವರ್ತಿಸಿದ್ದಾನೆ. ಅಂತಹ ವ್ಯಕ್ತಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿರುವುದು ವಿಪರ್ಯಾಸ. ಆರೋಪಿ ಜತೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿರುವುದೇ ಇದಕ್ಕೆ ನಿದರ್ಶನ ಎಂದರು.

ಅಧಿಕಾರಿಗಳು ಆಮಿಷಕ್ಕೆ ಬಲಿ?

ರೈತ ಮುಖಂಡ ಮೇಳ್ಯಾ ರಾಮಚಂದ್ರ ರೆಡ್ಡಿ ಮಾತನಾಡಿ, ಎಲ್ಲೆಡೆ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಲಂಚದ ಆಮಿಷಕ್ಕೆ ಬಲಿಯಾಗಿ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಇದರ ಫಲವಾಗಿ ಕ್ವಾರಿ ಮಾಲೀಕರು ಕಾನೂನುಗಳನ್ನು ಗಾಳಿಗೆ ತೂರಿ, ರಾಜಾರೋಷವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ರೈತರು ಜನಸಾಮಾನ್ಯರ ಮೇಲೆ ದೌರ್ಜನ ನಡೆಸುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net