

ಕೆ.ಆರ್.ನಗರ: ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ವಿದ್ಯುತ್ ದೀಪ ಅಳವಡಿಕೆ, ಬೆಟ್ಟಹಳ್ಳಿ ಗ್ರಾಮದಿಂದ ಮೈಸೂರಿಗೆ ನೇರ ಬಸ್ ವ್ಯವಸ್ಥೆ, ಸೆಸ್ಕ್ ಅಧಿಕಾರಿಗಳ ನಿರ್ಲಕ್ಷೃ. ಹೀಗೆ ಹತ್ತು ಹಲವು ದೂರುಗಳು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಕೇಳಿ ಬಂದವು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಅಧಿಕಾರಿಗಳು ತಬ್ಬಿಬ್ಬಾದರು.
ಗ್ಯಾರಂಟಿ ಯೋಜನೆ ಜಾರಿಗೆ ತಂದರೂ ಪಡಿತರಕ್ಕಾಗಿ ಅಲೆದಾಟ ತಪ್ಪುತ್ತಿಲ್ಲ. ಕೆಲ ಅಂಗಡಿಗಳಲ್ಲಿ ಪಡಿತರಕ್ಕೆ ಬದಲಾಗಿ ಹಣ ನೀಡುತ್ತಾರೆ. ಇನ್ನು ಕೆಲವರು ಮೂರು ದಿನ ನೀಡಿ ಬಾಗಿಲು ಮುಚ್ಚಿ ಅಕ್ಕಿ ಇಲ್ಲ ಎನ್ನುತ್ತಾರೆ. ಪಟ್ಟಣದ ಅಂಗಡಿಯವರು ಮೈಸೂರಿನಿಂದ ಬಂದು ಪಡಿತರ ವಿತರಣೆ ಮಾಡುತ್ತಾರೆ. ಇಷ್ಟಾದರೂ ಅಧಿಕಾರಿಗಳಿಂದ ಮಾತ್ರ ಯಾವುದೇ ಕ್ರಮ ಇಲ್ಲ ಎಂದು ಸದಸ್ಯರು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದರು.
ಪಟ್ಟಣದ ಆಂಜನೇಯ ಬ್ಲಾಕ್‌ನಲ್ಲಿರುವ ವಸಂತ ಮತ್ತು ಕೋಮಲಬಾಯಿ ಎಂಬ ನ್ಯಾಯಬೆಲೆ ಅಂಗಡಿ ಮಾಲೀಕರು ಮೈಸೂರಿನಲ್ಲಿ ವಾಸವಿದ್ದು, ಅವರಿಗೆ ಬಿಡುವಿದ್ದಾಗ ಬಂದು ಪಡಿತರ ವಿತರಣೆ ಮಾಡುತ್ತಾರೆ. ಅಲ್ಲಿಯವರೆಗೆ ಜನರು ತಮ್ಮ ಕೆಲಸ ಬಿಟ್ಟು ಪಡಿತರಕ್ಕಾಗಿ ಬೀಗ ಹಾಕಿದ ಅಂಗಡಿಯನ್ನೇ ನೋಡುವಂತಾಗಿದೆ. ಈ ಬಗ್ಗೆ ಏಕೆ ಕ್ರಮಕೈಗೊಂಡಿಲ್ಲ ಎಂದು ಸದಸ್ಯ ಕೆಂಚಿ ಮಂಜು ಪ್ರಶ್ನೆ ಮಾಡಿದರು.
ಕೆ.ಆರ್.ನಗರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್ ಮಾತನಾಡಿ, ಗ್ಯಾರಂಟಿ ಸಮಿತಿ ಸದಸ್ಯರು ತಮ್ಮ ಭಾಗಗಳಲ್ಲಿ ಕಂಡಂತಹ ಸಮಸ್ಯೆಗಳ ಬಗ್ಗೆ ಯಾವುದೇ ಭಯ, ಮುಲಾಜಿಲ್ಲದೆ ದೂರು ನೀಡಿ ಸರ್ಕಾರದ ಯೋಜನೆ ಫಲಾನುಭವಿಗಳಿಗೆ ತಲುಪಲು ಸಹಕರಿಸಿ ಎಂದು ಮನವಿ ಮಾಡಿದರು.
ಶೀಘ್ರ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಿ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಚರ್ಚಿಸಲಾಗುವುದು. ನಿಯಮ ಮೀರಿ ನಡೆದುಕೊಂಡಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಸಾಲಿಗ್ರಾಮ ತಾಲೂಕು ಅಧ್ಯಕ್ಷ ಉದಯ ಶಂಕರ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಲತಾರವಿ, ತಾ.ಪಂ.ಇಒಗಳಾದ ಕುಲದೀಪ್, ಎ.ಎನ್.ರವಿ, ಸಿಡಿಪಿಒ ಅಣ್ಣಯ್ಯ, ಚೆಸ್ಕಾಂ ಎಇಇಗಳಾದ ಅರ್ಕೇಶ್ ಮೂರ್ತಿ, ಕೆ.ಎಂ.ಮಧುಸೂದನ್, ಆಹಾರ ಇಲಾಖೆಯ ಶಿರಸ್ತೇದಾರ್ ಮಂಜುನಾಥ್, ಸಿಬ್ಬಂದಿಗಳಾದ ಕುಮಾರ್, ಸುರೇಶ್, ಕೆಎಸ್‌ಆರ್‌ಟಿಸಿ ಬಸ್ ಘಟಕದ ವ್ಯವಸ್ಥಾಪಕ ಕುಮಾರ್, ನಿರೀಕ್ಷಕ ಎಂ.ಸುರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಜಿ.ಎಂ.ಹೇಮಂತ್, ಕೆಂಚಿ ಮಂಜು, ನಂದೀಶ್, ರಾಣಿ, ಮೋಹನ್, ಕೆಡಗ ರವಿ, ಮಹಾಲಿಂಗಪ್ಪ, ಕುಮಾರ, ಲೋಕೇಶ್ ಇತರರು ಇದ್ದರು