ಗ್ರಾಮ ಸಭೆ ಮೂಲಕ ಗ್ರಾರಂಟಿ ಯೋಜನೆ ತಲುಪಿಸಿ

19-pnp 1
?????????????
Published on

ಪಾಂಡವಪುರ: ರಾಜ್ಯದ ಜನರ ಬದುಕನ್ನು ಉತ್ತಮಗೊಳಿಸಲು ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರ ಆರ್ಥಿಕ ಬಲವರ್ಧನೆ ಮತ್ತು ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಗ್ಯಾರಂಟಿ ಭಾಗ್ಯದಿಂದ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಗ್ಯಾರಂಟಿ ಯೋಜನೆ ಹಣ ಸ್ವಲ್ಪ ತಡವಾಗಿಯಾದರೂ ಪ್ರತಿಯೊಬ್ಬ ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ. ಒಂದು ಸರ್ಕಾರ ಇಷ್ಟು ದೊಡ್ಡ ಮಟ್ಟದ ಹಣವನ್ನು ನೇರವಾಗಿ ಜನರಿಗೆ ತಲುಪಿಸಿರುವ ಇತಿಹಾಸ ಇಲ್ಲ. ತಾಂತ್ರಿಕ ತೊಂದರೆಗಳಿಂದ ಸಣ್ಣ ಪುಟ್ಟ ವ್ಯತ್ಯಾಸವಾಗಬಹುದು ಎಂಬುದನ್ನು ಬಿಟ್ಟರೆ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಐದು ಗ್ಯಾರಂಟಿಗಳು ಸಮರ್ಪಕವಾಗಿ ಜಾರಿಯಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರ ಪ್ರಾಧಿಕಾರ ರಚನೆ ಮಾಡಿ ಜಿಲ್ಲಾ ಮತ್ತು ತಾಲೂಕುವಾರು ಸಮಿತಿ ರಚನೆ ಮಾಡಿದೆ. ಈ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೆ ಭಾಗವಹಿಸಿ ಗ್ಯಾರಂಟಿ ಭಾಗ್ಯಕ್ಕೆ ಅನುಷ್ಠಾನಕ್ಕೆ ಇರುವ ಲೋಪದೋಷಗಳನ್ನು ಸರಿಪಡಿಸುವ ಕೆಲಸ ಮಾಡಬೇಕು. ಏನೋ ಸಭೆ ಕರೆದಿದ್ದಾರೆ ಬಂದಿದ್ದೀವಿ, ಟೀ, ಕಾಫಿ, ತಿಂಡಿ ತಿಂದು ಹೋದರಾಯಿತು ಎಂಬ ಮನೋಭಾವದಿಂದ ಕೆಲಸ ಮಾಡಬಾರದು. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ನಾವು ಇಲ್ಲಿಗೆ ಬರುವ ಪ್ರಮೇಯ ಇರುವುದಿಲ್ಲ. ಅದಕ್ಕಾಗಿ ಅಧಿಕಾರಿಗಳು ಕಚೇರಿ ಬಿಟ್ಟು ಹೊರಬಂದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ: ಅತಿ ಹೆಚ್ಚು ಗಾತ್ರದ ಬಜೆಟ್ ಹೊಂದಿರುವ ಗ್ಯಾರಂಟಿ ಯೋಜನೆಯನ್ನು ಅರ್ಹರಿಗೆ ತಲುಪಿಸುವುದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಮಹಿಳಾ ಗ್ರಾಮ ಸಭೆ, ಮಕ್ಕಳ ಗ್ರಾಮ ಸಭೆ ಮಾದರಿಯಲ್ಲಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆ ವಿಲೇವಾರಿ ಸಭೆ ಮಾಡಬೇಕು. ಜಿಪಂ ಸಿಇಒ ಅವರು ಇದಕ್ಕೆ ಅಗತ್ಯ ಮಾರ್ಗದರ್ಶನ ಮಾಡಲಿದ್ದಾರೆ. ಈ ಸಭೆಯಲ್ಲಿ ಕೇವಲ ಗ್ಯಾರಂಟಿ ಭಾಗ್ಯಗಳ ಅನುಷ್ಠಾನ ಕುರಿತಂತೆ ಚರ್ಚೆ ಆಗಬೇಕು. ಪಂಚಾಯಿತಿ ಸದಸ್ಯರು, ಪಿಡಿಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿರಬೇಕು. ಜುಲೈ ತಿಂಗಳನಲ್ಲಿ ಈ ಸಭೆ ಆಯೋಜನೆಗೊಳ್ಳಬೇಕು ಎಂದು ತಾಕೀತು ಮಾಡಿದರು.

ಯುವ ಸಮುದಾಯದ ಬಗ್ಗೆ ಯಾವ ಸರ್ಕಾರವು ಯೋಚಿಸಿಯೂ ಇಲ್ಲ ಅವರಿಗೆ ಬಿಡಿಗಾಸು ಕೂಡ ನೀಡಿಲ್ಲ. ಆದರೆ ನಮ್ಮ ಸರ್ಕಾರ ಯುವ ಸಮುದಾಯದ ಏಳಿಗೆಗೆ ಯುವ ನಿಧಿ ಯೋಜನೆ ಜಾರಿಗೊಳಿಸಿ ಆ ಮೂಲಕ ಯುವ ಸಮುದಾಯಕ್ಕೆ ನೆರವಾಗಿದೆ. ಯುವಕರಿಗೆ 2 ಕೋಟಿ ಉದ್ಯೋಗ ಕೋಡ್ತೀವಿ ಎಂದು ಹೇಳಿದವರು ಏನೂ ಮಾಡಲಿಲ್ಲ. ನಮ್ಮ ಗ್ಯಾರಂಟಿ ಯೋಜನೆಯನ್ನು ಇತರ ರಾಜ್ಯದವರು ನಕಲು ಮಾಡಿದ್ದಾರೆ. ಟ್ರಂಪ್ ಹಾಗೂ ವಿಶ್ವಸಂಸ್ಥೆ ಕೂಡ ಗ್ಯಾರಂಟಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆೆ ಎಂದರು.

ಗೃಹಲಕ್ಷ್ಮಿ ಹಣದಲ್ಲಿ ಅಂಗಡಿ : ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಉಳಿತಾಯ ಮಾಡಿ ಹೂವು, ಹಣ್ಣು, ಪೂಜೆ ಸಾಮಾನು ಮಾರಾಟದ ಅಂಗಡಿ ತೆರೆದಿರುವ ತಾಲೂಕಿನ ಕೆನ್ನಾಳು ಗ್ರಾಮದ ಜಯಲಕ್ಷ್ಮೀ ಅವರ ಅಂಗಡಿಗೆ ಭೇಟಿ ನೀಡಿ ಯೋಜನೆಯಿಂದ ಯಾವ ರೀತಿ ಲಾಭವಾಗಿದೆ, ಯೋಜನೆ ಮಹಿಳೆಯರಿಗೆ ಎಷ್ಟು ಅನುಕೂಲಕರವಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಫಲಾನುಭವಿ ಜಯಲಕ್ಷ್ಮೀ ಅವರು ಪುಷ್ಪಾ ಅಮರನಾಥ್ ಅವರಿಗೆ ವೀಳ್ಯದೆಲೆ, ಅಡಕೆ, ಹೂವು ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ್. ಜಿಪಂ ಸಿಒಒ ಕೆ.ಆರ್.ನಂದಿನಿ, ತಹಸೀಲ್ದಾರ್ ಎಸ್.ಸಂತೋಷ್, ಸಿಡಿಪಿಒ ಪೂರ್ಣಿಮಾ, ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ತಾಲೂಕು ಅಧ್ಯಕ್ಷ ಎಚ್.ಸಿ.ಕೃಷ್ಣೇಗೌಡ(ಕಿಟ್ಟಿ), ಸದಸ್ಯರಾದ ಚಿಕ್ಕಾಡೆ ಶ್ರೀಕಾಂತ್, ಅನಿಲ್‌ಕುಮಾರ್, ಸಿದ್ದಲಿಂಗಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net