

ಯಲ್ಲಾಪುರ: ಕಸ್ತೂರಿ ರಂಗನ್ ವರದಿ ಜಿಲ್ಲೆಗೆ ಮಾರಕವಾಗಿರುವ ಹಿನ್ನೆಲೆಯಲ್ಲಿ, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗ್ರಹಿಸಿ, ಜಿಲ್ಲೆಯ ಅರಣ್ಯವಾಸಿಗಳು ಸಂಘಟಿತರಾಗಿ ಕೇಂದ್ರ ಸರಕಾರವನ್ನು ಆಗ್ರಹಿಸುವ ಉದ್ದೇಶದಿಂದ, ಫೆಬ್ರುವರಿಯಲ್ಲಿ ದೆಹಲಿ ಚಲೋ ನಡೆಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಭಾನುವಾರ ಪಟ್ಟಣದ ವೆಂಕಟ್ರಮಣ ಮಠದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಣ್ಯವಾಸಿಗಳ ಸಭೆಯಲ್ಲಿ ಮಾತನಾಡಿದರು. ಪಶ್ಚಿಮ ಘಟ್ಟದ ಜೀವ ವೈವಿಧ್ಯಗಳ ಸಂರಕ್ಷಣೆಯ ಉದ್ದೇಶದಿಂದ ಕೇಂದ್ರ ಪರಿಸರ, ಅರಣ್ಯ ಸಚಿವಾಲಯವು ಕಸ್ತೂರಿ ರಂಗನ್ ವರದಿಯಂತೆ ಸುಮಾರು 59,940 ಚ.ಕೀ.ಮೀ ಪ್ರದೇಶವನ್ನು ಪರಿಸರ ಅತೀ ಸೂಕ್ಷ್ಮ ಪ್ರದೇಶವೆಂದು ಘೋಷಿಸಿದೆ. ಕರ್ನಾಟಕದಲ್ಲಿ 20,668 ಚ.ಕೀ.ಮೀ ಪ್ರದೇಶವು 1597 ಹಳ್ಳಿಗಳಲ್ಲಿ ವಿಸ್ತರಿಸಿದ್ದು, ಅದರಂತೆ ಜಿಲ್ಲೆಯ 9 ತಾಲೂಕುಗಳ 604 ಹಳ್ಳಿಗಳು ಸೇರ್ಪಡೆಗೊಂಡಿದೆ ಎಂದು ವರದಿಯ ಬಗೆಗೆ ತಿಳಿಸಿದರು.
ಅಸಮರ್ಪಕ ಜಿಪಿಎಸ್ ಕುರಿತಾಗಿ ಅರಣ್ಯವಾಸಿಗಳು ಸಲ್ಲಿಸಿದ ಮೇಲ್ಮನವಿಯನ್ನು ಪುರಸ್ಕರಿಸಿ, ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಅವರು ಆಗ್ರಹಿಸಿದರು. ಅವೈಜ್ಞಾನಿಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸುವಂತೆ ಒತ್ತಾಯಿಸಿ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜಿಲ್ಲಾದ್ಯಂತ ಒಂದು ಲಕ್ಷ ಕುಟುಂಬಗಳಿಂದ ಆಕ್ಷೇಪಣಾ ಪತ್ರ ಸಲ್ಲಿಸುವ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ತಾಲೂಕು ಅಧ್ಯಕ್ಷ ಭೀಮ್ಸಿ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಚಾಲಕರಾದ ಸೀತಾರಾಮ ನಾಯ್ಕ, ನಾಗರಾಜ ಮರಾಠಿ, ಭಾಸ್ಕರ ಗೌಡ, ರಾಜ ಸಿದ್ದಿ, ರಾಮ ಕುಣಬಿ ಮಾತನಾಡಿದರು. ಗಣಪತಿ ಕುಣಬಿ, ಕೇಶವ ಮಲೆನಳ್ಳಿ, ಎಸ್ ಎನ್ ಹೆಗಡೆ, ಹಬಿಬ್ ಸಾಬ್ ಕಿರವತ್ತಿ, ಥಾಮಸ್ ಮದ್ನೂರು, ರಾಮಾ ಸಿದ್ದಿ ಉಚಗೇರಿ, ಪರಮೇಶ್ವರ ಬಾರೆ ಉಪಸ್ಥಿತರಿದ್ದರು. ಅನಂತ ಗೌಡ ಸ್ವಾಗತಿಸಿದರು, ಅಣ್ಣಪ್ಪ ಕಣ್ಣಿಗೇರಿ ವಂದಿಸಿದರು.
ಇದನ್ನೂ ಓದಿ: ಗೋವಾ ಗಡಿಯ ಸ್ಮಗ್ಲರ್ಗಳಿಗೆ ಡ್ರೋನ್ ಭಯ!