

ರಾಮದೇವರ ಬೆಟ್ಟದ ತಪ್ಪಲಿನ ಕಡೇ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ಶೋಧ
ರಾಮನಗರ: ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಳ್ಳಿಮಾಳ ಗ್ರಾಮದ ಬಳಿ ರಾಮದೇವರ ಬೆಟ್ಟದ ತಪ್ಪಲಿನಲ್ಲಿರುವ ಕಡೇ ಬಾಗಿಲು ಆಂಜನೇಯಸ್ವಾಮಿ ದೇವಾಲಯದಲ್ಲಿ ನಿಧಿ ಆಸೆಗಾಗಿ ದೇವಾಲಯದಲ್ಲಿ ದೊಡ್ಡ ಗುಂಡಿ ತೆಗೆದು ಆಂಜನೇಯಸ್ವಾಮಿ ಮೂರ್ತಿಯನ್ನು ವಿರೂಪಗೊಳಿಸಲಾಗಿದೆ.
ಗುರುವಾರ ಹುಣ್ಣುಮೆ ರಾತ್ರಿ ನಿಧಿಗಾಗಿ ಶೋಧ ನಡೆದಿದೆ. ದೇವಾಲಯದಲ್ಲಿ ದುಷ್ಕರ್ಮಿಗಳು ಸುಮಾರು 10 ಅಡಿ ಆಳವಾದ ಹಳ್ಳ ತೆಗೆದು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಶನಿವಾರ ದನಗಾಹಿಗಳು ದೇವಾಲಯದಲ್ಲಿನ ಪ್ರಕರಣದ ಬಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಸ್ಥರು ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಂಜನೇಯಸ್ವಾಮಿ ದೇವಾಲಯ ಪುರಾತನ ದೇವಾಲಯವಾಗಿದೆ. ಬೆಟ್ಟಕ್ಕೆ ತೆರಳುವ ಮೂಲದಾರಿಯಲ್ಲಿ ದೇಗುಲವಿದೆ. ದೇವಾಲಯದ ಜೀರ್ಣೋದ್ಧಾರ ಕೈಗೊಂಡು ಹೊಸ ಕಟ್ಟಡವನ್ನು ನಿರ್ಮಿಸಲಾಗಿತ್ತು. ಶ್ರಾವಣ ಮಾಸದ ಮೊದಲ ಶನಿವಾರ ಗ್ರಾಮಸ್ಥರು ಆಂಜನೇಯಸ್ವಾಮಿ ಪರ ಮಾಡಿ ನಂತರದ ಶನಿವಾರಗಳಲ್ಲಿ ಮನೆಗಳಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ . ನಿಧಿ ಶೋಧನೆ ಮಾಡುವ ಸಂದರ್ಭದಲ್ಲಿ ಆಂಜನೇಯಸ್ವಾಮಿ ವಿಗ್ರಹವನ್ನು ವಿರೂಪಗೊಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.