

ಬೆಂಗಳೂರು: ಮುಂಗಾರು ಕೊನೆಗೊಳ್ಳಲು ಕೆಲ ದಿನಗಳು ಬಾಕಿ ಇರುವಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕ್ಷೀಣವಾಗಿದೆ. ರಾಗಿ ಸೇರಿ ಇತರೆ ಬೆಳೆಗಳಿಗೆ ನೀರಿನಾಂಶ ಅಗತ್ಯವಿತ್ತು. ಆದರೆ, ವಾರದಿಂದ ಮಳೆ ಇಳಿಮುಖವಾದ ಪರಿಣಾಮ ಬೆಳೆಗಳು ಒಣಗಲು ಶುರುವಾಗಿವೆ.
ವಾತಾವರಣದಲ್ಲಿ ತೇವಾಂಶ ಕೊರತೆ ಇರುವುದು, ಅರಬ್ಬಿ ಸಮುದ್ರದಲ್ಲಿ ಮೇಲ್ಮೆ ಸುಳಿಗಾಳಿ ಅಥವಾ ವಾಯುಭಾರ ಕುಸಿತ ಇಲ್ಲದಿರುವುದೂ ಸೇರಿ ಇತರೆ ಕಾರಣಗಳಿಂದ ಸದ್ಯ ಮುಂಗಾರು ದುರ್ಬಲವಾಗಿದೆ.ಈ ಹಿನ್ನೆಲೆಯಲ್ಲಿ ಸೆ.18ರಿಂದ ಸೆ.23ರವರೆಗೆ, ಕರಾವಳಿ, ಮಲೆನಾಡು, ದಣ ಕರ್ನಾಟಕ ಸೇರಿ ರಾಜ್ಯದಲ್ಲಿ ಮಳೆ ಬೀಳುವ ಲಕ್ಷಣಗಳಿಲ್ಲ. ಸೆ.24ರಿಂದ ರಾಜ್ಯದಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪ್ರಸಕ್ತ ತಿಂಗಳಲ್ಲಿ ಶೇ.17 ಮಳೆ ಕೊರತೆ: ಮೂರು ತಿಂಗಳಿಂದ ಉತ್ತಮವಾಗಿ ಮಳೆಯಾಗಿದ್ದ ರಾಜ್ಯದಲ್ಲಿ ಪ್ರಸಕ್ತ ತಿಂಗಳು ಮಳೆ ಕೊರತೆ ಎದುರಾಗಿದೆ. ಸೆ.1ರಿಂದ ಸೆ.18ರವರೆಗೆ ರಾಜ್ಯಾದ್ಯಂತ 88 ಮಿಮೀ ಮಳೆಯಾಗಬೇಕಿತ್ತು. ಆದರೆ, 73 ಮಿಮೀ ಮಳೆಯಾಗಿದ್ದು, ಶೇ.17ರಷ್ಟು ವಾಡಿಕೆಗಿಂತ ಕಡಿಮೆ ಸುರಿದಿದೆ. ಆದರೂ, ಕರಾವಳಿ, ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಯಷ್ಟೂ ಮಳೆ ಸುರಿದರೆ, ದಣ ಕರ್ನಾಟಕದಲ್ಲಿ ಶೇ. 77, ಉತ್ತರ ಕರ್ನಾಟಕದಲ್ಲಿ ಶೇ.31ರಷ್ಟು ಮಳೆ ಕೊರತೆ ಉಂಟಾಗಿದೆ. 21 ಜಿಲ್ಲೆಗಳಲ್ಲಿ ಶೇ.90ರಷ್ಟು ಮಳೆ ಕೊರತೆಯಾಗಿದೆ.ದಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಆಗಸ್ಟ್ನಿಂದ ಅಕ್ಟೋಬರ್ವರೆಗೆ ಹೆಚ್ಚು ರಾಗಿ ಬೆಳೆ ಬೆಳೆಯುತ್ತಾರೆ.ಆದರೆ, ಈ ಅವಧಿಯಲ್ಲಿ ಮಳೆ ಕುಂಠಿತದಿಂದ ಬೆಳೆಗಳು ಒಣಗುತ್ತಿವೆ.