ಸೋಲಿನ ಕಾರಣ ಪತ್ತೆಗೆ ಕಾಲಹರಣ ಬೇಡ: ಮಾಜಿ ಶಾಸಕ ತಿಪ್ಪೇಸ್ವಾಮಿ ಕಿವಿಮಾತು

Defeat, detect, linger, MLA,
Published on

ನಾಯಕನಹಟ್ಟಿ: ಸೋಲಿಗೆ ಕಾರಣಗಳನ್ನು ಹುಡುಕುತ್ತ ಕಾಲ ವ್ಯರ್ಥ ಮಾಡದೆ ಶೀಘ್ರದಲ್ಲಿ ಬರಲಿರುವ ಜಿಪಂ ಮತ್ತು ತಾಪಂ ಚುನಾವಣೆಗೆ ಸಿದ್ಧರಾಗಬೇಕು ಎಂದು ಕಾರ್ಯಕರ್ತರಿಗೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಕಿವಿಮಾತು ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು, ಶೆಟ್ಟರ್, ಸವದಿ, ಈಶ್ವರಪ್ಪ ಅವರನ್ನು ಕಡೆಗಣಿಸಿದ್ದು ರಾಜ್ಯಮಟ್ಟದಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದರು.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಬೆಂಬಲಿತ ಅಭ್ಯರ್ಥಿಯನ್ನು ಸೋಲಿಸುತ್ತೇವೆಂದು ಒಂದು ಗುಂಪು ನಿರ್ಧರಿಸಿತ್ತು. ಮರಳು, ಭೂಗಳ್ಳತನಗಳ ಜನರು ಕಾಂಗ್ರೆಸ್ ಅನ್ನು ಬೆಂಬಲಿಸಿದರು.

5 ವರ್ಷಗಳ ಕಾಲ ಸಚಿವರಾಗಿದ್ದ ಶ್ರೀರಾಮುಲು ಅವರ ಆಪ್ತ ಸಹಾಯಕರ ಆಡಳಿತದಿಂದ ಬಿಜೆಪಿಯ ಹಿರಿಯರು ಹಾಗೂ ಮುಖಂಡರು ಮೂಲೆ ಸೇರಿದ್ದು ಕೂಡ ಸೋಲಿಗೆ ಕಾರಣವಾಯಿತು ಎಂದು ಹೇಳಿದರು.

ಕಾಲ ಮಿಂಚಿಲ್ಲ

ಇನ್ನೂ ಕೂಡ ಕಾಲ ಮಿಂಚಿಲ್ಲ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೆ ನೀಡುತ್ತಿರುವ 5 ಕೆಜಿ ಅಕ್ಕಿ ಪೂರೈಕೆ ನಿಲ್ಲಿಸಬೇಕು.

ಈ ಹಣವನ್ನು ಫಲಾನುಭವಿಗಳಿಗೆ ನೇರವಾಗಿ ವರ್ಗಾಯಿಸಬೇಕು. ಈ ನಿಟ್ಟಿನಲ್ಲಿ ರಾಜ್ಯದ ಮುಖಂಡರು ಕೇಂದ್ರದ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಮಂಡಲ ಅಧ್ಯಕ್ಷ ಇ.ರಾಮರೆಡ್ಡಿ ಮಾತನಾಡಿ, ನಾಯಕನಹಟ್ಟಿ ಪಪಂ ನಲ್ಲಿ 6 ಕೋಟಿ ರೂ. ವೆಚ್ಚದ ಕಾಮಗಾರಿಗಳು ಆಗುತ್ತಿದ್ದವು. ಆದರೆ, ಇವುಗಳು ಇಲ್ಲಿನ ಮುಖಂಡರು ಮತ್ತು ಕಾರ್ಯಕರ್ತರಿಗೆ ತಿಳಿಯದಂತಹ ಪರಿಸ್ಥಿತಿ ಇತ್ತು.

ಗುತ್ತಿಗೆದಾರರು ನಾವು ಮಂತ್ರಿಗಳಿಗೆ ಮಾತ್ರ ಉತ್ತರಿಸುತ್ತೇವೆ ಎನ್ನುವ ಉಡಾಫೆ ಉತ್ತರ ನೀಡುತ್ತಿದ್ದರು. ಇಂತಹ ವರ್ತನೆ ಪಕ್ಷದ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಮುಖಂಡರಾದ ಎಂ.ವೈ.ಟಿ.ಸ್ವಾಮಿ, ಪರಮೇಶ್ವರಪ್ಪ, ಗೋವಿಂದಪ್ಪ, ರಾಜು, ಪ್ರಕಾಶ್, ಕನ್ನಯ್ಯ, ಶಿವಲಿಂಗಪ್ಪ, ಗೋವಿಂದು, ವೆಂಕಟೇಶ್ ಹಾಗೂ ನಾಯಕನಹಟ್ಟಿ ಮತ್ತು ತಳಕು ಹೋಬಳಿಗಳ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಪಕ್ಷದಲ್ಲಿನ ಜವಾಬ್ದಾರಿಯನ್ನು ಮುಖಂಡರು ಸೂಕ್ತವಾಗಿ ನಿರ್ವಹಿಸಬೇಕು. ಜಿಪಂ ಹಾಗೂ ತಾಪಂ ಚುನಾವಣೆಗೆ ಕಾರ್ಯಕರ್ತರು ಸಿದ್ಧರಾಗಬೇಕು. ಗ್ಯಾರಂಟಿಗಳಲ್ಲಿನ ಲೋಪಗಳ ವಿರುದ್ಧ ಬೀದಿಗೆ ಬಂದು ಹೋರಾಟ ನಡೆಸಬೇಕು. ಇದೀಗ ವಿದ್ಯುತ್ ಬಿಲ್ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ವಿರುದ್ಧ ಜನರ ಜತೆಗೆ ನಿಲ್ಲುವುದು ಅವಶ್ಯಕ.ಪಿ.ಶಿವಣ್ಣ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net