

ಹಾವೇರಿ: ಹೆಣ್ಣುಮಕ್ಕಳ ಮಾರಾಟ ದಂಧೆ ನಡೆಸುತ್ತಿದ್ದರು ಎಂದು ನನ್ನ ಮೇಲೆ ಸ್ಥಳೀಯ ಶಾಸಕ ನೆಹರು ಓಲೇಕಾರ ಮಾಡಿರುವ ಸುಳ್ಳು ಆರೋಪದ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ಅವರು ಹಾಗೂ ಅವರ ಮಕ್ಕಳ ಮೇಲೆ ಲೋಕಾಯುಕ್ತದಲ್ಲಿರುವ ದೂರುಗಳ ಮಾಹಿತಿ ನನ್ನ ಬಳಿಯಿದ್ದು ಶೀಘ್ರದಲ್ಲಿಯೇ ಅದನ್ನು ಬಹಿರಂಗಗೊಳಿಸುತ್ತೇನೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗನನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸುವ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗುವ ಮೊದಲೇ ನೆಹರು ಓಲೇಕಾರ ನನ್ನ ಚಾರಿತ್ರ್ಯ ವಧೆ ಮಾಡಿ ಹೇಳಿಕೆ ನೀಡಿದ್ದರು. ರಾಜಕಾರಣದಲ್ಲಿ ಪರಸ್ಪರ ಕೆಸರೆರೆಚಾಟ ಸಹಜ. ಆದರೆ, ಅದು ತೀರಾ ಕೀಳುಮಟ್ಟಕ್ಕೆ ಹೋಗದಂತೆ ರಾಜಕಾರಣ ಮಾಡಿದ್ದೇನೆ. ಆದರೆ, ಸ್ಥಳೀಯ ಶಾಸಕರು, ‘ನಾನು ಹೆಣ್ಣುಮಕ್ಕಳ ಮಾರಾಟ ದಂಧೆ ನಡೆಸುತ್ತಿದ್ದ ಕ್ರಿಮಿನಲ್ ಆಗಿದ್ದೆ. ಅವರ ಮಗನೂ ಈಗ ಕ್ರಿಮಿನಲ್ ಆಗಿದ್ದಾನೆ’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಯಾವುದಾದರೂ ದಾಖಲೆಗಳಿದ್ದರೆ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂದು ಸವಾಲು ಹಾಕಿದರು.
ಇವರು ಹಿಂದೆ ಸೋತ ಸಮಯದಲ್ಲಿ ಯಾರ ಪತ್ನಿಯನ್ನು ಪತಿ, ಮಕ್ಕಳಿಂದ ಬೇರ್ಪಡಿಸಿ ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರು. ಅವರನ್ನು ಚುನಾವಣೆ ಪ್ರಚಾರಕ್ಕೆ ಹೇಗೆ ಬಳಸಿಕೊಂಡರು. ಕೊನೆಗೆ ಆ ಮಹಿಳೆಯ ಅಂತ್ಯ ಹೇಗಾಯಿತು ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. ಇಂತಹ ಕೀಳು ಚರಿತ್ರೆ ನನಗಿಲ್ಲ. ಮತ್ತೊಬ್ಬರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ನನ್ನ ಮಕ್ಕಳು ಹೇಗಿದ್ದಾರೆ. ಅವರ ಮಕ್ಕಳು ಹೇಗಿದ್ದಾರೆ. ಏನೇನು ಮಾಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 36 ಗ್ರಾಪಂಗಳಲ್ಲಿ 19 ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಗ್ರಾಮೀಣ ಮತದಾರರು ಕಾಂಗ್ರೆಸ್ ಪರವಾಗಿರುವುದು ಈ ಚುನಾವಣೆಯಲ್ಲಿ ಬಹಿರಂಗವಾಗಿದೆ ಎಂದು ರುದ್ರಪ್ಪ ಲಮಾಣಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಡಾ. ಸಂಜಯ ಡಾಂಗೆ, ಎಂ.ಎಂ. ಮೈದೂರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಡ್ರಗ್ಸ್ ಸಾಗಾಟ ಪ್ರಕರಣದಲ್ಲಿ ನನ್ನ ಮಗನ ಮೇಲೆ ನೇರ ಆರೋಪಗಳಿಲ್ಲ. ಆ ದಂಧೆಯಲ್ಲಿ ತೊಡಗಿದ್ದವರಿಗೆ ಗೊತ್ತಿಲ್ಲದಂತೆ ಆಶ್ರಯ ನೀಡಿದ ಆರೋಪವಿದೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲ. ಈಗಾಗಲೇ ನ್ಯಾಯಾಲಯ ಜಾಮೀನು ನೀಡಿದೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.