ಹನೂರು ಬರಪೀಡಿತ ಪ್ರದೇಶ ಎಂದು ಘೋಷಿಸಿ

23 HANUR 1
Published on

ಹನೂರು: ಹನೂರು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಬಿಜೆಪಿ ಹನೂರು ಮಂಡಲದ ಪದಾಧಿಕಾರಿಗಳು ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಬಿಜೆಪಿ ಹನೂರು ಮಂಡಲಾಧ್ಯಕ್ಷ ಕಣ್ಣೂರು ಕೆ.ಪಿ.ವೃಷಬೇಂದ್ರಸ್ವಾಮಿ ಮಾತನಾಡಿ, ರಾಜ್ಯದ ವಿವಿಧೆಡೆ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ಆದರೆ ಹನೂರು ತಾಲೂಕಿನಲ್ಲಿ ಮಳೆಯಾಗದೆ ಕೆರೆ, ಕಟ್ಟೆಗಳು ಬತ್ತಿ ಹೋಗಿವೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇತ್ತ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿರುವ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ಆದ್ದರಿಂದ ಹನೂರನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು. ತಾಲೂಕು ಆಡಳಿತ ಗ್ರಾಮಗಳಲ್ಲಿ ತಲೆದೋರಿರುವ ಕುಡಿವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯವಿರುವೆಡೆ ಗೋ ಶಾಲೆಯನ್ನು ತೆರೆಯಬೇಕು. ಇನ್ನು ಕೃಷಿ ಇಲಾಖೆ ನೀಡುತ್ತಿರುವ 5 ಕೆಜಿ ಬಿತ್ತನೆ ಬೀಜ ಸಾಲುತ್ತಿಲ್ಲ. ಆದ್ದರಿಂದ ಪ್ರತಿ ಎಕರೆಗೆ 10 ಕೆಜಿ ಬಿತ್ತನೆ ಬೀಜ ವಿತರಿಸಬೇಕು. ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸುವ ಬೆಳೆ ವಿಮೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಮಂಡಲದ ಕಾರ್ಯದರ್ಶಿಗಳಾದ ಮಹದೇವ, ನಿರಂಜನ್, ಮಹದೇವಸ್ವಾಮಿ, ಶಿವರುದ್ರಸ್ವಾಮಿ, ಮಾಜಿ ಅಧ್ಯಕ್ಷ ಜಗನ್ನಾಥನಾಯ್ಡು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೂರ್ತಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net