

ಕುಶಾಲನಗರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಕೈಗೊಂಡಿರುವ ಸ್ವಚ್ಛತೆಗೆ ಪೂರಕವಾಗಿ ಮತ್ತು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳ ಶುದ್ಧೀಕರಣಗೊಳಿಸುವ ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಗುರುವಾರ ನಡೆದ ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಚರ್ಚೆ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆಗಳು ನಡೆದವು. ಈಗಾಗಲೇ ಮದಲಾಪುರ ಗ್ರಾಮದಲ್ಲಿ ಆರಂಭಗೊಂಡಿರುವ ವಾಣಿಜ್ಯ ಮಳಿಗೆಗಳಿಗೆ ಪರವಾನಗಿ ನೀಡುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಸದಸ್ಯರಲ್ಲಿ ಪರ-ವಿರೋಧ ವ್ಯಕ್ತವಾಯಿತು. ಅದರ ಹಿನ್ನೆಲೆಯಲ್ಲಿ 9 ಸದಸ್ಯರು ಕೈ ಎತ್ತುವ ಮೂಲಕ ವಾಣಿಜ್ಯ ಅಂಗಡಿ ಮಳಿಗೆಗಳಿಗೆ ಪರವಾನಗಿ ನೀಡಲು ಬೆಂಬಲ ಸೂಚಿಸಿದರೆ ಉಳಿದ 5 ಮಂದಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಪರವಾನಗಿ ನೀಡಲು ತೀರ್ಮಾನ ಕೈಗೊಳ್ಳಲಾಯಿತು. 15ನೇ ಹಣಕಾಸು ಯೋಜನೆಯ ಅನುಗುಣವಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆಗಳು ನಡೆಸಲಾಯಿತು. ಈಗಾಗಲೇ ಕೈಗೊಂಡಿರುವ ಕ್ರಿಯಾ ಯೋಜನೆಯ ಅನುಮೋದನೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಬಗ್ಗೆ ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಯಿತು.
ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ಮಾಡಿ, ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲು ತಿಳಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡ್ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಿಡಿಒ ಮಂಜುಳಾ ಸರ್ಕಾರ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸಭೆಗೆ ಬಂದ ಸಾರ್ವಜನಿಕರ ಅರ್ಜಿಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಯಿತು.
ಅಧ್ಯಕ್ಷ ಕೆ.ಟಿ.ಗಿರೀಶ್ ಮಾತನಾಡಿ, ಸದಸ್ಯರ ಸಹಕಾರದೊಂದಿಗೆ ಎಲ್ಲ ವಾರ್ಡ್‌ಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಉಪಾಧ್ಯಕ್ಷೆ ವಿ.ಜಯಶ್ರೀ, ಸದಸ್ಯರಾದ ಟಿ.ಪಿ.ಹಮೀದ್, ಎಸ್.ಎನ್.ಅನಂತ, ಮಂಗಳಾ, ಮೋಹಿನಿ, ಕೆ.ಎಸ್.ಶಿವಕುಮಾರ್, ವಾಣಿ, ರತ್ನಮ್ಮ, ಎಚ್.ಎಸ್.ರವಿ, ಪಲ್ಲವಿ, ಎಚ್.ಆರ್.ಚಂದ್ರು, ಎಂ.ಎಸ್.ಜಯಶೀಲಾ ಸೇರಿದಂತೆ ಗ್ರೇಡ್ 1 ಕಾರ್ಯದರ್ಶಿ ಅಂಜನಾದೇವಿ, ಕಾರ್ಯದರ್ಶಿ ಪುನೀತ್ ಮತ್ತಿತರರು ಹಾಜರಿದ್ದರು.