

ರಾಮನಗರ: ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಶಾಲಾ ಶುಲ್ಕ ಭರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಖಾಸಗಿ ಶಾಲಾ ಮುಖ್ಯಶಿಕ್ಷಕರು ಹಾಗೂ ಆಡಳಿತ ಮಂಡಳಿಯೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಹಾಗೂ ಏಕ ಪಾಲಕರನ್ನು ಹೊಂದಿರುವ ಮಕ್ಕಳ ಶುಲ್ಕ ಭರಿಸಲಾಗುತ್ತದೆ. ಕಳೆದ ಎರಡು ವರ್ಷಗಳಿಂದಲೂ ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿರುವ ಮಕ್ಕಳಿಗೆ ವೈಯಕ್ತಿಕ ವಿದ್ಯಾರ್ಥಿ ವೇತನ ನೀಡುತ್ತಿದ್ದೇನೆ. ಮೊದಲ ವರ್ಷ 25 ಲಕ್ಷ ರೂ. ನೀಡಿದ್ದು, 2ನೇ ವರ್ಷದಲ್ಲಿ 45 ಲಕ್ಷ ರೂ. ನೀಡಲಾಗಿತ್ತು. ಪಾಲಕರು ವಿದ್ಯಾರ್ಥಿಗಳ ಶಾಲಾ ಹಾಗೂ ಕಾಲೇಜು ಶುಲ್ಕ ಭರಿಸುವಂತೆ ಮನವಿ ಮಾಡುತ್ತಿದ್ದರು. ಹಾಗಾಗಿ ಈ ವರ್ಷ ಖಾಸಗಿ ಶಾಲಾ ಆಡಳಿತ ಮಂಡಳಿ ಸಭೆ ಕರೆದು ಬಡತನದಲ್ಲಿರುವ ಹಾಗೂ ಶಾಲೆ ಶುಲ್ಕ ಭರಿಸಲು ಸಾಧ್ಯವಾಗದೆ ಇರುವವರ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಸೌಲಭ್ಯ ಪಡೆಯುವಾಗ ಜಾತಿ, ಧರ್ಮ ಹಾಗೂ ಪಕ್ಷಪಾತ ಮಾಡದೆ ಬಡ ವಿದ್ಯಾರ್ಥಿಗಳು, ಶುಲ್ಕ ಭರಿಸಲು ಸಾಧ್ಯವಾಗದೆ ಇರುವವರು, ಕೂಲಿ ಕಾರ್ಮಿಕರ ಮಕ್ಕಳು ಮತ್ತು ಏಕ ಪಾಲಕರನ್ನು ಒಳಗೊಂಡಿರುವ ವಿದ್ಯಾರ್ಥಿಗಳನ್ನು ಪರಿಗಣಿಸುವಂತೆ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ. ಕಳೆದ ವರ್ಷ ಒಂದೇ ಶಾಲೆಗೆ 7.5 ಲಕ್ಷ ರೂ. ನೀಡಲಾಗಿತ್ತು. ಜತೆಗೆ 33 ಖಾಸಗಿ ಶಾಲೆಗಳು ಹಾಗೂ 25 ಕಾಲೇಜುಗಳಿಗೆ ಒಟ್ಟು 45 ಲಕ್ಷ ರೂ. ವಿತರಣೆ ಮಾಡಿದ್ದೆ, ಈ ಬಾರಿಯೂ ಅಗತ್ಯ ಇರುವವರ ಪಟ್ಟಿ ಪಡೆದು, ಆಯಾ ಶಾಲೆಯ ಹೆಸರಿನಲ್ಲಿ ಡಿಡಿ ನೀಡಲಾಗುತ್ತದೆ ಎಂದರು.
ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುವುದು ಅನಿವಾರ್ಯವಾಗಿದೆ. ಜತೆಗೆ, ಸರ್ಕಾರಿ ಹಾಗೂ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡಿದರವರ ನಡುವೆ ಸಾಕಷ್ಟು ಅಂತರ ಇರಲಿದೆ. ಜಿಲ್ಲೆಯ ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮ ಹಾಕಲಾಗುತ್ತಿದೆ. ಬೆರಳೆಣಿಕೆ ಸಂಖ್ಯೆ ಇರುವ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆೆ ಸೇರಿಸಲಾಗುತ್ತಿದೆ. ಈ ಹಿನ್ನಲೆ ಗ್ರಾಮಾಂತರ ಪ್ರದೇಶದಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆದು ಗುಣಮಟ್ಟದ ವಿದ್ಯಾಭ್ಯಾಸ ನೀಡಲಾಗುತ್ತಿದೆ ಎಂದರು.