ಶೇ.4 ಆಸ್ತಿಗಳ ತೆರಿಗೆ ಹೆಚ್ಚಿಕ್ಕೆ ನಿರ್ಧಾರ

11_12_rama_Flag (cmc) 1
Published on

ರಾಮನಗರ

ನಗರದ ಆಸ್ತಿಗಳ ಮೇಲಿನ ತೆರಿಗೆಯನ್ನು ಶೇ.4 ಹೆಚ್ಚಿಸುವ ನಿರ್ಧಾರವನ್ನು ರಾಮನಗರ ನಗರಸಭೆ ಅಂಗೀಕರಿಸಿದೆ.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರ ನೇತೃತ್ವದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಸಂಬಂಧ ಮಂಡಿಸಿದ ವಿಷಯಕ್ಕೆ ಕೆಲವರ ವಿರೋಧದ ನಡುವೆ ಶೇ.4 ಹೆಚ್ಚಳಕ್ಕೆ ಅಂಗೀಕಾರ ದೊರೆಯಿತು.

ಸರ್ಕಾರದ ಸುತ್ತೋಲೆ ಅನ್ವಯ 2025-26ನೇ ಸಾಲಿನ ಆಸ್ತಿ ತೆರಿಗೆಯನ್ನು ಶೇ.3ರಿಂದ 5ರಂದು ಪರಿಷ್ಕರಣೆ ಮಾಡಬೇಕಿದೆ ಎಂದು ಸಭೆಯನ್ನು ಅಧಿಕಾರಿಗಳು ವಿಷಯವನ್ನು ಮಂಡಿಸಿದರು. ಈ ವೇಳೆ ಜೆಡಿಎಸ್ ಸದಸ್ಯ ಗ್ಯಾಬ್ರಿಯಲ್, ಉಮೇಶ್ ಹಾಗೂ ಕೆಲ ಕಾಂಗ್ರೆಸ್ ಸದಸ್ಯರು ತೆರಿಗೆ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದರು.

ಈಗಾಗಲೇ ಜನತೆ ನಮ್ಮನ್ನು ಶಪಿಸುತ್ತಿದ್ದಾರೆ, ಈಗ ಮತ್ತೆ ಹೆಚ್ಚಳ ಮಾಡಿದರೆ ಹೇಗೆ ಯಾವುದೇ ಕಾರಣಕ್ಕೂ ತೆರಿಗೆ ಪರಿಷ್ಕರಣೆ ಮಾಡಬಾರದು ಎಂದು ಪಟ್ಟು ಹಿಡಿದರು.

ಇದಕ್ಕೆ ಕಾಂಗ್ರೆಸ್ ಸದಸ್ಯೆ ಪಾರ್ವತಮ್ಮ ವಿರೋಧ ವ್ಯಕ್ತಪಡಿಸಿ, ನಗರದ ಅಭಿವೃದ್ಧಿಗೆ ಹಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶೇ. 5 ತೆರಿಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿಯೂ ನಡೆದು, ಕೆಲವರು ಶೇ.3 ಹೆಚ್ಚಳಕ್ಕೆ ಮನವಿ ಮಾಡಿದರೆ ಕೆಲವರು ಶೇ.4 ಹೆಚ್ಚಿಸಿ ಎನ್ನುವ ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಕೆ.ಶೇಷಾದ್ರಿ, ನಗರಸಭೆಯಲ್ಲಿ ಸಾಕಷ್ಟು ತುರ್ತು ಕಾಮಗಾರಿಗಳನ್ನು ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ನಾವು ಸರ್ಕಾರದ ಅನುಧಾವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರವೂ ಸಹ ನಗರಸಭೆಯ ತುರ್ತು ಕೆಲಸಕ್ಕೆ ಅನುಧಾನವನ್ನು ಸಹ ನೀಡುವುದಿಲ್ಲ.ಇದಕ್ಕೆ ನಾವು ಸಂಗ್ರಹಿಸುವ ತೆರಿಗೆಯಿಂದಲೇ ಪಾವತಿ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಆಗತ್ಯವಿದೆ. ಅಭಿವೃದ್ಧಿ ಬೇಕಾದರೆ ಇದನ್ನು ಒಪ್ಪಿಕೊಳ್ಳಲೇಬೇಕಿದೆ ಎಂದು ಸ್ಪಷ್ಟಪಡಿಸಿದರು. ಅಂತಿಮವಾಗಿ ಶೇ.4 ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಭೆಯಲ್ಲಿ ಅಂಗೀಕಾರ ದೊರೆಯಿತು.

ಸಭೆ ಆರಂಭದಲ್ಲಿಯೇ ಬೀದಿದೀಪ ನಿರ್ವಹಣೆ ಸಂಬಂಧ ಸದಸ್ಯ ಗ್ಯಾಬ್ರಿಯಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಹಾಕಿರುವ ಬೀದಿ ದೀಪಗಳು ಸಂಜೆಯಾದರೆ ಡ್ಯಾನ್ಸ್ ಮಾಡುತ್ತವೆ, ಅಧಿಕಾರಿಗಳನ್ನು ಕೇಳಿದರೆ ಎಲ್ಲವೂ ಸರಿ ಇದೆ ಎಂದು ಹೇಳುತ್ತಾರೆ ಎಂದು ಟೀಕಿಸಿದರು. ಬೀದಿ ದೀಪಗಳನ್ನು ನಿರ್ವಹಣೆ ಮಾಡುವ ಭರವಸೆ ದೊರೆತ ನಂತರ ಸಭೆ ಮುಂದುವರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net