

ಚನ್ನರಾಯಪಟ್ಟಣ: ತಾಲೂಕು ಆಡಳಿತದ ವತಿಯಿಂದ ಏಪ್ರಿಲ್ 5ರಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಹಾಗೂ ಏಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಶಾಸಕ ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿರುವ ಸಭಾಂಗಣದಲ್ಲಿ ಸೋಮವಾರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅರ್ಥಪೂರ್ಣವಾಗಿ ಜಯಂತಿ ಆಚರಿಸಿದಾಗ ಮಾತ್ರ ಮಹಾತ್ಮರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ತಾಲೂಕು ಮಟ್ಟದಲ್ಲಿ ಬಾಬು ಜಗಜೀವನರಾಂ ಮತ್ತು ಡಾ.ಅಂಬೇಡ್ಕರ್ ಜಯಂತಿಗಳನ್ನು ಪ್ರತ್ಯೇಕವಾಗಿ ಆಚರಿಸಬೇಕೆಂದು ಕೆಲವು ಮುಖಂಡರ ಸಲಹೆಯ ಮೇರೆಗೆ ಬರುವ ಏಪ್ರಿಲ್ 5ರಂದು ಡಾ.ಬಾಬು ಜಗಜೀವನರಾಂ ಅವರ 118ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಮಿನಿ ವಿಧಾನಸೌಧ ಆವರಣದಲ್ಲಿ ಸರಳವಾಗಿ ಆಚರಿಸಲಾಗುವುದು ಅಂದು ಜಯಂತಿ ಕಾರ್ಯಕ್ರಮ ಅಂಗವಾಗಿ ಉಪನ್ಯಾಸಕರಿಂದ ಡಾ.ಬಾಬು ಜಗಜೀವನರಾಂ ಅವರ ಜೀವನ ಚರಿತ್ರೆ ಹಾಗೂ ಸಾಧನೆ ಕುರಿತು ಉಪನ್ಯಾಸ ನಡೆಸಲು ತೀರ್ಮಾನಿಸಲಾಯಿತು.
ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಬೆಳಗ್ಗೆ ವಿವಿಧ ಕಲಾ ತಂಡಗಳೊಂದಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಪಟ್ಟಣದ ಕೃಷಿ ಇಲಾಖೆ ಮುಂಭಾಗ ಭವ್ಯವಾದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನುರಿತ ಉಪನ್ಯಾಸಕರಿಂದ ಉಪನ್ಯಾಸ ಏರ್ಪಡಿಸುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ, ಸಮಾಜದ ಏಳಿಗೆಗಾಗಿ ಶ್ರಮಿಸಿದ ಸಾಧಕರನ್ನು ಸನ್ಮಾನಿಸಲು ನಿರ್ಧರಿಸಲಾಯಿತು. ಆಯಾ ಜಯಂತಿ ದಿನಗಳಂದು ನಗರದಲ್ಲಿರುವ ಸರ್ಕಾರಿ ಕಚೇರಿಗಳಿಗೂ ಹಾಗೂ ವಿವಿಧ ವೃತ್ತಗಳಿಗೆ ದೀಪಾಲಂಕಾರ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ವೇದಿಕೆ ಅಲಂಕಾರ, ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆಯೂ, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಕಡ್ಡಾಯವಾಗಿ ಪೂಜೆ ಸಲ್ಲಿಸುವಂತೆ ಹಾಗೂ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ನೌಕರರು ಜಯಂತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಇಒಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ವಿ.ಎಸ್.ನವೀನ್ ಕುಮಾರ್, ಪುರಸಭಾ ಅಧ್ಯಕ್ಷ ಸಿ.ಎನ್. ಮೋಹನ್, ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಚನ್ನರಾಯಪಟ್ಟಣ ಉಪ ವಿಭಾಗ ಪೊಲೀಸ್ ಉಪಅಧೀಕ್ಷಕ ಎನ್.ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-2 ಸಹಾಯಕ ನಿರ್ದೇಶಕ ಎಚ್.ಎನ್.ಸತೀಶ್, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.