

ಕೊಳ್ಳೇಗಾಲ: ಭಕ್ತಶ್ರೇಷ್ಠ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಬಗ್ಗೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ವಹಿಸಿಕೊಂಡಿದ್ದರು. ಈ ವೇಳೆ ಕುರುಬ ಸಂಘದ ಕಾರ್ಯದರ್ಶಿ ಮುಖಂಡ ಸೋಮಶೇಖರ್ ಮಾತನಾಡಿ, ಕಳೆದ 5 ವರ್ಷಗಳಿಂದ ಕರೊನಾ ಇನ್ನಿತರ ಕಾರಣಗಳಿಂದ ವಿಜೃಂಭಣೆಯಿಂದ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಈ ಭಾರಿ ನ.30 ರಂದು ಅದ್ದೂರಿಯಾಗಿ ಆಚರಿಸುವ ಬಗ್ಗೆ ನಮ್ಮ ಸಮಾಜದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದೇವೆ. ಬೆಳ್ಳಿರಥದಲ್ಲಿ ಮೆರವಣಿಗೆ ಕನಕದಾಸರ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಗುತ್ತದೆ. 30 ಕಲಾ ತಂಡಗಳ ಮೆರವಣಿಗೆ ಭಾಗವಹಿಸಲಿವೆ. ಕುರುಬ ಸಮಾಜದ 8 ಗಡಿಗಳಿಂದ ಜನರು ಕಾರ್ಯಕ್ರಮಕ್ಕೆ ಬರುತ್ತಾರೆ. ತಾಲೂಕು ಆಡಳಿತ ನಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕನಕದಾಸರ ಜಯಂತಿಯನ್ನು ಚೆನ್ನಾಗಿ ಹಾಗೂ ಗೌರವಯುತವಾಗಿ ಆಚರಣೆ ಮಾಡಲು ಸಮಾಜದ ಮುಖಂಡರು ಸಲಹೆ ನೀಡಿದ್ದಾರೆ. ಅದರಂತೆ ಕುರುಬ ಸಮಾಜದ ಸಹಕಾರದಿಂದ ಜಯಂತಿ ಆಚರಣೆಯನ್ನು ಯಶಸ್ವಿಯಾಗಿ ಮಾಡೋಣ ಎಂದರು.
ಅಂದು ಎಂಜಿಎಸ್‌ವಿ ಕಾಲೇಜು ಆವರಣದಲ್ಲಿ ಶ್ರೀಭಕ್ತ ಕನಕದಾಸರ ಭಾವಚಿತ್ರ ಅಳವಡಿಸಿದ ಬೆಳ್ಳಿರಥಕ್ಕೆ ಚಾಲನೆ ಸಿಗುತ್ತದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ಆವರಣಕ್ಕೆ ತಲುಪಿದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯುತ್ತದೆ. ಜವಾಬ್ದಾರಿ ಹೊತ್ತ ಇಲಾಖೆಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಬಿಇಒ ಮಂಜುಳಾ, ಕುರುಬರ ಸಂಘದ ಕಾರ್ಯದರ್ಶಿ ಸೋಮಶೇಖರ್ ಹಾಗೂ ಸಂಘದ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕುರುಬ ಸಮಾಜ ಮುಖಂಡರು ಭಾಗವಹಿಸಿದ್ದರು.