ನೀರಿನ ಗುಣಮಟ್ಟ ಪರೀಕ್ಷೆಗೆ ನಿರ್ಧಾರ

LXR MEETINGGGGGGGGG
Published on

ಲಕ್ಷ್ಮೇಶ್ವರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್, ತಾಂತ್ರಿಕ ತೊಂದರೆ ಹಾಗೂ ಪೈಪ್‌ಲೈನ್ ದುರಸ್ತಿಯಿಂದ ಪಟ್ಟಣದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಎಲ್ಲವನ್ನೂ ಸರಿಪಡಿಸಲಾಗಿದೆ. ಸಮರ್ಪಕವಾಗಿ ನೀರು ಪೂರೈಕೆಯಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳಿದರು.


ಸೋಮವಾರ ಪಟ್ಟಣದ ವಾರ್ಡ್ ನಂ.10ರ ನಿವಾಸಿಗಳು ಸಮರ್ಪಕ ನೀರು ಪೂರೈಕೆಗಾಗಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಹಿನ್ನೆಲೆ ವಾರ್ಡಿನ ನಿವಾಸಿಗಳ ಮತ್ತು ಸದಸ್ಯರ ಸಭೆ ನಡೆಸಿದ ಅವರು, ನದಿ ನೀರಿನ ಪೂರೈಕೆಯಲ್ಲಿ ತೊಂದರೆಯಾಗಿದ್ದರಿಂದ ಗ್ರಾಮೀಣ ಭಾಗಕ್ಕೆ ಎಲ್‌ಟಿ ಕಂಪನಿಯ ಪೈಪ್‌ಲೈನ್‌ನಿಂದ ಕೆಲ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗಿದೆ.

ಈ ನೀರು ಶುದ್ಧವಾಗಿದೆ. ಆದರೂ ನೀರಿನ ಗುಣಮಟ್ಟದ ಪರೀಕ್ಷೆಗೆ ಕಳುಹಿಸಲಾಗಿದೆ. ವಾರ್ಡಿನ ಕೆಲವು ಜನರಲ್ಲಿ ನೆಗಡಿ, ಜ್ವರ ಇನ್ನಿತರ ಲಕ್ಷಣಗಳನ್ನು ಕಂಡು ಬಂದಿದ್ದು, ಅವರ ಮನೆಗೆ ಬೇಟಿ ನೀಡಿದ ವೈದ್ಯರು ಇದು ವೈರಲ್ ಜ್ವರ ಎಂದು ಖಚಿತಪಡಿಸಿದ್ದಾರೆ ಎಂದು ಹೇಳಿದರು.


ವಾರ್ಡಿನ ನಿವಾಸಿಗಳಾದ ಮಾಂತೇಶ ಗೋಡಿ, ಗೌರಮ್ಮ ಗೋಡಿ, ಲಕ್ಷ್ಮೀ ಕುಂಬಾರ, ಶಾಂತವ್ವ ಕುಂಬಾರ, ನಿಂಗಮ್ಮ ಕುಂಬಾರ, ನೀಲವ್ವ ಗೋಡಿ, ರೇಖಾ ಗೋಡಿ ಮಾತನಾಡಿ, ವರ್ಷಕ್ಕೆ 1,440 ರೂ ನೀರಿನ ಬಿಲ್ ಕಟ್ಟಬೇಕು. ಆದರೆ, ತಿಂಗಳಿಗೆ 2 ಬಾರಿ ನೀರು ಕೊಡುತ್ತೀರಿ. ಮಳೆಗಾಲದಲ್ಲಿ ರಾಡಿ ನೀರು, ಬೇಸಿಗೆಯಲ್ಲೂ ಅಶುದ್ಧವಲ್ಲದ ನೀರನ್ನು 15 ದಿನಕ್ಕೊಮ್ಮೆ ಕೊಟ್ಟರೆ ಈ ನೀರು ಕುಡಿಯುವುದರಿಂದ ಆರೋಗ್ಯ ಹದಗೆಡುತ್ತದೆ. ವಾರಕ್ಕೊಮ್ಮೆ ನೀರು ಕೊಡಲೇಬೇಕು. ಇಲ್ಲದಿದ್ದರೆ ಮಹಿಳೆಯರೆಲ್ಲ ಪುರಸಭೆಗೆ ದೌಡಾಯಿಸುತ್ತೇವೆ ಎಂದು ಎಚ್ಚರಿಸಿದರು.


ವಾರ್ಡ್ ಸದಸ್ಯ ಮಹೇಶ ಹೊಗೆಸೊಪ್ಪಿನ ಮತ್ತು ಕರವೇ ಜಿಲ್ಲಾಧ್ಯಕ್ಷ ಶರಣು ಗೋಡಿ ಮಾತನಾಡಿ, ಶಾಸಕ ಡಾ. ಚಂದ್ರು ಲಮಾಣಿ ಪಟ್ಟಣದ ನೀರಿನ ಸಮಸ್ಯೆ ಪರಿಹರಿಸದೆ ಗ್ರಾಮೀಣ ಭಾಗಕ್ಕೆ ಎಲ್‌ಟಿ ಕಂಪನಿಯಿಂದ ಸರಬರಾಜು ಆಗುವ ನೀರಿನ ವಾಲ್ವ್ ತಿರುವಿ ಜನರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಇದರಿಂದ ಪಟ್ಟಣದ ನೀರಿನ ಸಮಸ್ಯೆ ಬಗೆಹರಿಯದು. ಬದಲಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ದೂರಿದರು.


ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿರುವುದರಿಂದ ಶಾಸಕರು, ಪಟ್ಟಣದ ಅಭಿವೃದ್ಧಿ ಬಗ್ಗೆ ಚಿಂತನೆಯುಳ್ಳ ನಾಯಕರು, ಅಧಿಕಾರಿಗಳು ಸಮರ್ಪಕ, ಶುದ್ಧ ನೀರು ಪೂರೈಸುವುದರತ್ತ ಚಿತ್ತ ಹರಿಸಬೇಕು. ಇಲ್ಲದಿದ್ದರೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ಸಾರ್ವಜನಿಕರ ಜತೆಗೂಡಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ನೀರಿನ ಸಮಸ್ಯೆಯ ಬಗ್ಗೆ ‘ವಿಜಯವಾಣಿ’ ಸೋಮವಾರ ಖಾಲಿ ಕೊಡ ಹಿಡಿದು ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ ಸುದ್ದಿ ಪ್ರಕಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net