ಅದ್ದೂರಿ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

09Kush04
ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಕಿರಣ್ ಗೌರಯ್ಯ, ಬಿಇಒ ಎಸ್.ಭಾಗ್ಯಮ್ಮ, ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಇತರರು ಇದ್ದರು.
Published on

ಕುಶಾಲನಗರ: ಗಣರಾಜ್ಯೋತ್ಸವವನ್ನು ಜ.26 ರಂದು ಅದ್ದೂರಿಯಾಗಿ ಆಚರಿಸಲು ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕುಶಾಲನಗರ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ಚರ್ಚೆಗಳು ನಡೆದವು.

ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಅದ ನ್ಯೂನತೆಗಳು ಪುನರಾವರ್ತನೆ ಆಗದಂತೆ ಜಾಗ್ರತೆ ವಹಿಸಲು ಸಮಾಜ ಸೇವಕ ಎಂ.ಇ.ಮೊಹಿದ್ದೀನ್ ತಿಳಿಸಿದರು.

ಕ್ರೀಡೆ, ಪೌರಕಾರ್ಮಿಕ, ಪತ್ರಿಕೋದ್ಯಮ, ಆರೋಗ್ಯ ಮತ್ತು ಕೃಷಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲು ತೀರ್ಮಾನಿಸಲಾಯಿತು. ಎಲ್ಲ ಸರ್ಕಾರಿ ಅಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಸೂಚಿಸಲು ಸಭೆಯಲ್ಲಿದ್ದವರು ತಹಸೀಲ್ದಾರ್ ಕಿರಣ್ ಗೌರಯ್ಯ ಅವರನ್ನು ಆಗ್ರಹಿಸಿದರು.

ಗಣರಾಜ್ಯೋತ್ಸವದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತೆ ಶಿಕ್ಷಣ ಇಲಾಖೆಗೆ ತಿಳಿಸಲಾಯಿತು. ಸ್ಥಳೀಯ ಸಂಘ, ಸಂಸ್ಥೆಗಳ ಪ್ರಮುಖರನ್ನು ಸೇರಿಸಿಕೊಂಡು ಉಪಸಮಿತಿಗಳನ್ನು ರಚಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಭಾಗ್ಯಮ್ಮ, ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್, ಮಹಿಳಾ ಸಮಾಜದ ಅಧ್ಯಕ್ಷೆ ಸಲಿನಾ, ಕಾವಲುಪಡೆಯ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ದಲಿತ ಸಂಘರ್ಷ ಸಮಿತಿ (ಭೀಮವಾದ) ಅಧ್ಯಕ್ಷ ರಾಜು, ವೀರಶೈವ ಸಮಾಜದ ಜಿಲ್ಲಾ ಕಾರ್ಯದರ್ಶಿ ಶಾಂಭಶಿವ ಮೂರ್ತಿ, ಖಜಾಂಚಿ ಉದಯಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net