ಅವನತಿ ಅಂಚಿನಲ್ಲಿ ಐತಿಹಾಸಿಕ ಕೋಟೆ

9 Hanumasagara 1B
ಶ್ರೀ ಚಂದಾಲಿಂಗೇಶ್ವರ ದೇವಸ್ಥಾನ ಪ್ರವೇಶದಲ್ಲಿರುವ ಅರಿವಿನ ಮಂಟಪ.
Published on

ಹನುಮಸಾಗರ: ಸಮೀಪದ ಬೆಟ್ಟದ ಮೇಲೆ ಇರುವ ಐತಿಹಾಸಿಕ ಶ್ರೀ ಚಂದಾಲಿಂಗೇಶ್ವರ ದೇವಸ್ಥಾನ ಸುತ್ತಲಿನ ಕಲ್ಲಿನ ಕೋಟೆ ಅವನತಿ ಅಂಚಿನಲ್ಲಿದ್ದು ಕಾಯಕಲ್ಪಕ್ಕೆ ಕಾಯುತ್ತಿದೆ.

ಅರಣ್ಯದಲ್ಲಿರು ಚಂದಾಲಿಂಗೇಶ್ವರ ದೇವಸ್ಥಾನ ನಾಡಿನ ವಾಸ್ತುಶಿಲ್ಪದ ಸಿರಿವಂತಿಕೆ ಸಾರುವ ಶಿಲ್ಪ ವೈಭವ ಕಾಣಬಹುದಾಗಿದೆ. 56 ಕಂಬಗಳ ಕೆತ್ತನೆ ಒಳಗೊಂಡಿರುವ ಅರಿವಿನ ಮಂಟಪ ನೋಡುಗರ ಕಣ್ಮನ ಸೆಳೆಯುತ್ತದೆ. ದೇವಸ್ಥಾನ ಸುತ್ತಲು ಕಲ್ಲಿನ ಕೋಟೆ ಇದ್ದು, ಅದರ ಒಳಗೆ ಬಸವಣ್ಣ, ವಿಶ್ವೇಶ್ವರ ಲಿಂಗ, ಶ್ರೀಶೈಲ ಮಲ್ಲಿಕಾರ್ಜುನ, ಉಜ್ಜಯಿನಿ ಸಿದ್ದೇಶ್ವರ, ಶ್ಯಾಮನಾಥ ಲಿಂಗ, ವಿರೂಪಾಕ್ಷಲಿಂಗ ಮೂರ್ತಿಗಳಿವೆ.

ದೇವಸ್ಥಾನ ಪಕ್ಕ ಬಿಸಿಲು ಬೀಳದ ಬಾವಿ ಇದ್ದು, ಇಲ್ಲಿ ನೀರು ಸಿಹಿ ಇರುವುದರಿಂದ ಹಾಲುಬಾವಿ ಎಂದು ಕರೆಯುತ್ತಾರೆ. ಪ್ರಸ್ತುತ ಕೋಟೆ, ಮೂರ್ತಿಗಳು ಅವನತಿಯಾಗುತ್ತಿದ್ದು, ಇವುಗಳನ್ನು ಜೀರ್ಣೋದ್ಧಾರ ಮಾಡಬೇಕಾಗಿದೆ.

ಐತಿಹಾಸಿಕ ಹಿನ್ನೆಲೆ: ಕೋಟೆಯ ಉತ್ತರ ಭಾಗದಲ್ಲಿ ವೀರಭದ್ರ ಹಾಗೂ ಯಲ್ಲಾಲಿಂಗ ದೇಗುಲಗಳಿವೆ. ಈ ದೇಗುಲದ ಪಕ್ಕದಲ್ಲಿ ಒಂದು ಸಣ್ಣ ಕೊಳ ಇದೆ. ಇದಕ್ಕೆ ಹೂವಿನ ಕೊಳ ಎಂದು ಕರೆಯುತ್ತಾರೆ. ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯ ಈ ಭಾಗದಲ್ಲಿ ಮೂರು ತಿಂಗಳ ಅವಧಿಯ ವಿಹಾರಕ್ಕೆಂದು ದೇವಾಲಯ ಸಮುಚ್ಛಯದಲ್ಲಿ ಬರುತ್ತಿದ್ದನೆಂದು, ಅದಕ್ಕಾಗಿ ಕೋಟೆ ನಿರ್ಮಿಸಿರಬೇಕೆಂದು ಊಹಿಸಲಾಗಿದೆ. ಇಂತಹ ಅಪೂರ್ವ ಇತಿಹಾಸ ಹೊಂದಿರುವ ಈ ಕೋಟೆಯ ಸಂರಕ್ಷಣೆ ಜಜೂರಿದೆ.

ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಚಂದಾಲಿಂಗೇಶ್ವರ ದೇವಸ್ಥಾನಕ್ಕೆ ಜಿಲ್ಲೆ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಮತ್ತು ಭಕ್ತರು ಬರುತ್ತಾರೆ. ಆದರೆ, ಇಲ್ಲಿ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹನುಮಸಾಗರ ಪಟ್ಟಣದಿಂದ 5 ಕಿ.ಮೀ. ಬೆಟ್ಟದ ಮೇಲೆ ಇರುವ ಚಂದಾಲಿಂಗೇಶ್ವರ ದೇಸ್ಥಾನಕ್ಕೆ ಸೂಕ್ತ ರಸ್ತೆ ಇದ್ದರು, ವಾಹನ ಸೌಲಭ್ಯವಿಲ್ಲ. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರು ಖಾಸಗಿ ವಾಹನಗಳ ಮೊರೆ ಹೋಗಬೇಕಾಗಿದೆ. ಬೈಕ್ ಹಾಗೂ ಖಾಸಗಿ ವಾಹನಗಳಲ್ಲಿ ಅನೇಕರು ದೇವಸ್ಥಾನಕ್ಕೆ ಬಂದರೆ, ಕೆಲವರು ಕಾಲುನಡಿಗೆಯಲ್ಲೇ ಬರುತ್ತಾರೆ. ಪ್ರವಾಸಿಗರಿಗೆ ವಿಶ್ರಮಿಸಲು ಕೊಠಡಿಗಳಿಲ್ಲ. ಉಪಹಾರಕ್ಕೆ ಹೋಟೆಲ್‌ಗಳಿಲ್ಲ. ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಸಿರುವುದಿಲ್ಲ. ಶುದ್ಧ ಕುಡಿವ ನೀರಿನ ಘಟಕ ಇಲ್ಲದಿದ್ದರಿಂದ ಫ್ಲೋರೈಡ್‌ಯುಕ್ತ ನೀರೇ ಭಕ್ತರಿಗೆ ಗತಿಯಾಗಿದೆ. ದೇವಸ್ಥಾನದಲ್ಲಿ ಅಡುಗೆ ಕೋಣೆ, ಭಕ್ತರಿಗೆ ವಿಶ್ರಾಂತಿ ಕೋಠಡಿ, ಊಟದ ಕೋಠಡಿ, ಶುದ್ಧ ಕುಡಿವ ನೀರಿನ ಘಟಕ ಅವಶ್ಯಕವಿದೆ.

ಮೂಲ ಸೌಲಭ್ಯ ಮರಿಚೀಕೆ

ಚಂದಾಲಿಂಗೇಶ್ವರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಬರುತ್ತಾರೆ. ಆದರೆ, ದೇವಸ್ಥಾನಕ್ಕೆ ತೆರಳಲು ಬಸ್ ವ್ಯವಸ್ಥೆ ಸರಿಯಾಗಿಲ್ಲ. ಕನಿಷ್ಠಪಕ್ಷ ಅಮಾವಾಸ್ಯೆ ದಿನವಾದರೂ ಬಸ್ ಇದ್ದರೆ ಅನುಕೂಲವಾಗುತ್ತದೆ. ಕೋಟೆಯಲ್ಲಿರುವ ದೇಗುಲಗಳನ್ನು ಜೀರ್ಣೋದ್ಧಾರ ಮಾಡಿ ಮೂಲ ಸೌಕರ್ಯ ಒದಗಿಸಬೇಕಿದೆ. ವೀರೇಶ ಈಳಗೇರ ಚಂದಾಲಿಂಗೇಶ್ವರ ದೇವಸ್ಥಾನ ಭಕ್ತ, ಹನುಮಸಾಗರ ಚಂದಾಲಿಂಗೇಶ್ವರ ದೇವಸ್ಥಾನ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಅಭಿವೃದ್ಧಿಗೆ ಸಮಸ್ಯೆ ಆಗುತ್ತಿದೆ. ಐತಿಹಾಸಿಕ ದೇವಸ್ಥಾನದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ಆದರೆ ಅಭಿವೃದ್ಧಿ ಮಾಡಲಾಗುವುದು. ಅಶೋಕ ಶಿಗ್ಗಾವಿ ತಹಸೀಲ್ದಾರ್ ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net