

ಹನುಮಸಾಗರ: ಸೇವಾ ಭದ್ರತೆಗಾಗಿ ತರಗತಿ ಬಹಿಷ್ಕರಿಸಿ ಮುಷ್ಕರ ಕೈಗೊಂಡಿರುವ ಕುಷ್ಟಗಿ ತಾಲೂಕು ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಹನುಮಸಾಗರ ಪಟ್ಟಣದಿಂದ ಚಂದಾಲಿಂಗೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷ ಶಂಕರ ಅಡವಿಬಾವಿ ಮಾತನಾಡಿ, ರಾಜ್ಯಾದ್ಯಂತ ಕಳೆದ 35 ದಿನಗಳಿಂದ ಅತಿಥಿ ಉಪನ್ಯಾಸಕರು ಸೇವಾಭದ್ರತೆಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡ್ಡಿದ್ದೇವೆ. ಸರ್ಕಾರ ಸಂಕ್ರಾಂತಿಗೆ ಶುಭಸುದ್ದಿ ನೀಡಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ, ರಾಜ್ಯದ 14,500 ಅತಿಥಿ ಉಪನ್ಯಾಸಕರ ಪೈಕಿ ಎಂಟು ಸಾವಿರ ಜನರನ್ನು ಕಾಲೇಜಿನಿಂದ ಹೊರಹಾಕುವ ಸಂಚು ರೂಪಿಸಿದೆ. ಇದರಿಂದ ಹಲವು ಕುಟುಂಬಗಳು ಬೀದಿ ಪಾಲಾಗಲಿವೆ. ಆದ್ದರಿಂದ ತಾಲೂಕಿನ ಅತಿಥಿ ಉಪನ್ಯಾಸಕರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲು ಹನುಮಸಾಗರದಿಂದ 5 ಕಿಮೀ ದೂರದ ಚಂದಾಲಿಂಗೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಎಲ್ಲ ಅತಿಥಿ ಉಪನ್ಯಾಸಕರಿಗೆ ಅನೂಕುಲವಾಗುವಂತ ಆದೇಶ ಸರ್ಕಾರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ತಾಲೂಕು ಉಪಾಧ್ಯಕ್ಷ ಭೀಮಣ್ಣ, ಪ್ರಧಾನ ಕಾರ್ಯದರ್ಶಿ ಶಿವರಾಜ್ ಕೋಳೂರು, ಖಜಾಂಚಿ ಬಸಯ್ಯ ಮಠಪತಿ, ಸದಸ್ಯರಾದ ವಿಶ್ವನಾಥ ತೊಂಡಿಹಾಳ, ಮಹಾಂತೇಶ ಗವಾರಿ, ಎಸ್.ಸಿ.ಬಂಡಿಹಾಳ ಇತರರಿದ್ದರು.