

ಬಾಗೇಪಲ್ಲಿ: ಸಾಲ ವಸೂಲಿ ನೆಪದಲ್ಲಿ ಮೈಕ್ರೊ ಪೈನಾನ್ಸ್ ಸಂಸ್ಥೆಗಳು ಮಹಿಳೆಯರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿವೆ ಎಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಸಂತ್ರಸ್ತ ಮಹಿಳೆಯರು ಪಟ್ಟಣದ ಮುಖ್ಯರಸ್ತೆಯಲ್ಲಿ ಸೋಮವಾರ ಜಾಥಾ ನಡೆಸಿ ತಾಲೂಕು ಕಚೇರಿ ಎದುರು ಪ್ರತಿಭಟಿಸಿ ತಹಸೀಲ್ದಾರ್ ಮನಿಷಾ ಎನ್. ಪತ್ರಿ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಸಂಚಾಲಕಿ ಸಾವಿತ್ರಮ್ಮ ಮಾತನಾಡಿ, ಬಲವಂತವಾಗಿ ಸಾಲ ಕೊಟ್ಟು ಹಣ ವಾಪಸ್ಸು ಕಟ್ಟುವಂತೆ ಕಿರುಕುಳ ನೀಡುವ ಮೈಕ್ರೊ ಪೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕನಿಷ್ಠ ಮಾಸಿಕ ಆದಾಯ ಇಲ್ಲದ ಕುಟುಂಬಗಳು ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಒಳಗೊಂಡಂತೆ, ಇತರ ರಾಷ್ಟ್ರೀಕೃತ ಮತ್ತು ಸಹಕಾರ ಸಂಘಗಳಿಂದ ಪಡೆದಿರುವ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಸಿಪಿಐಎಂ ಮುಖಂಡ ಚನ್ನರಾಯಪ್ಪ ಮಾತನಾಡಿ, ಸಂಸ್ಥೆಗಳ ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ನಿಯಮ ರೂಪಿಸಬೇಕು. ಈಗಾಗಲೇ ವಸೂಲಿ ಮಾಡಿರುವ ಬಡ್ಡಿ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಲೇ ಕಡಿಮೆ ಬಡ್ಡಿಗೆ ಸಾಲ ಪಡೆದು, ಅದನ್ನು ಬಡವರಿಗೆ ನೀಡಿ ಹೆಚ್ಚು ಬಡ್ಡಿ ವಸೂಲಿ ಮಾಡುವುದನ್ನು ತಡೆಯಬೇಕು. ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ ಕನಿಷ್ಠ ₹5 ಲಕ್ಷದವರೆಗೆ ಬ್ಯಾಂಕ್‌ಗಳಲ್ಲಿ ಸಾಲ ನೀಡಲು ಸರಳ ನಿಯಮ ರೂಪಿಸಿ ಜಾರಿಗೊಳಿಸಬೇಕು. ಈ ಕುರಿತು ತಹಸೀಲ್ದಾರ್ ಹೆಚ್ಚು ಗಮನ ಹರಿಸಬೇಕು. ಪೈನಾನ್ಸ್ ಸಂಸ್ಥೆಗಳು ಹಾಗೂ ಸಂತ್ರಸ್ತರ ಸಭೆ ನಡೆಸಿ ಕಠಿಣ ನಿಯಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಸೋಮಶೇಖರ್, ಎಸ್.ಲಕ್ಷ್ಮಣರೆಡ್ಡಿ, ಸಂತ್ರಸ್ತ ಮಹಿಳೆಯರಾದ ಸಿ.ಉಮಾ, ಅನಿತಾ, ಸರಿತಾ, ಲಕ್ಷ್ಮೀ ನರಸಮ್ಮ, ಶಾಂತಮ್ಮ ಮತ್ತಿತರರು ಇದ್ದರು.
ಕಡಿವಾಣ ಹಾಕಲು ಕಾನೂನು ಜಾರಿಯಾಗಲಿ: ಇತ್ತೀಚೆಗೆ ಹೆಚ್ಚಾಗಿರುವ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿಗೆ ನಿಯಂತ್ರಣ ಹಾಕಲು ಸರ್ಕಾರ ಕಾನೂನು ಜಾರಿ ಮಾಡಬೇಕು. ಕಿರುಕುಳಕ್ಕೆ ಒಳಗಾಗುವ ಕುಟುಂಬಗಳಿಗೆ ರಕ್ಷಣೆ ಒದಗಿಸಬೇಕು. ಮಹಿಳಾ ಸ್ವಸಹಾಯ ಸಂಘ ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಸರ್ಕಾರವೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಬ್ಸಿಡಿ ಸಹಿತ ದೀರ್ಘಾವಧಿ ಸಾಲ ನೀಡಬೇಕು ಎಂದು ಸಾವಿತ್ರಮ್ಮ ಒತ್ತಾಯಿಸಿದರು.