ಋಣಮುಕ್ತ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

FotoJet
Published on

ಜನವಾದಿ ಮಹಿಳಾ ಸಂಘಟನೆ, ಸಿಪಿಐಎಂ ನೇತೃತ್ವ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಬೇಡಿಕೆ ಈಡೇರದಿದ್ದಲ್ಲಿ ಹೋರಾಟ

ಗೌರಿಬಿದನೂರು: ದುಡಿಯುವ, ಅಸಂಘಟಿತ ವರ್ಗದ ಕಾರ್ಮಿಕರನ್ನು ಸಾಲದಿಂದ ಋಣಮುಕ್ತರನ್ನಾಗಿಸಲು ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಋಣಮುಕ್ತ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜನವಾದಿ ಮಹಿಳಾ ಸಂಘಟನೆ, ಸಿಐಟಿಯು ಹಾಗೂ ಸಿಪಿಐಎಂ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ತಾಲೂಕು ಆಡಳಿತ ಸೌಧದ ಆವರಣದಲ್ಲಿ ಪ್ರತಿಭಟನೆ ನಡೆಸಿ ಕಿರು ಹಣಕಾಸು ಸಂಸ್ಥೆಗಳು ಸಾಲಗಾರರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯನ್ನು ಖಂಡಿಸಲಾಯಿತು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ನಗರದಲ್ಲಿ ಅನೇಕ ಕಿರು ಹಣಕಾಸು ಸಂಸ್ಥೆಗಳು ಆರ್‌ಬಿಐ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ಅಸಲಿಯತ್ತಿನ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿಲ್ಲ. ಸಾಲ ವಸೂಲಿ ಮಾಡುವವರು ಪ್ರತಿವಾರ ಮನೆಗೆ ಬಂದು ಬಲವಂತದ ವಸೂಲಾತಿ, ಸಾರ್ವಜನಿಕರ ಮುಂದೆ ಅವಮಾನ ಮಾಡುವ ಮೂಲಕ ಸಾಲಗಾರರೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಧರ್ಮಸ್ಥಳ ಸಂಘದವರು ದೇವರ ಹೆಸರನ್ನು ಇಟ್ಟುಕೊಂಡು ಬಡವರಿಗೆ ಕಿರುಕುಳ ನೀಡಿ ದಂಧೆ ಮಾಡುತ್ತಿದ್ದಾರೆ. ಕೂಡಲೇ ಕಿರುಕುಳ ನಿಲ್ಲಿಸಬೇಕು. ಇಲ್ಲವಾದರೆ ಇಂತಹ ಅಧರ್ಮದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಈಗಾಗಲೇ ನೆರೆಯ ಕೇರಳದಲ್ಲಿ ಋಣಮುಕ್ತ ಕಾಯ್ದೆ ಜಾರಿಗೆ ತರಲಾಗಿದೆ. ರಾಜ್ಯದಲ್ಲೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಎಲ್ಲ ಸಂಘಗಳ ಸಾಲ ಮನ್ನಾ ಮಾಡಿ ಋಣಮುಕ್ತರನ್ನಾಗಿ ಮಾಡಬೇಕು, ರಾಷ್ಟೀಕೃತ ಬ್ಯಾಂಕ್‌ಗಳಲ್ಲಿ ಯಾವುದೇ ಅಡಮಾನ ಮತ್ತು ಬಡ್ಡಿ ಇಲ್ಲದೆ ಮಹಿಳೆಯರಿಗೆ ಸಾಲ ನೀಡಬೇಕು. ಕರ್ನಾಟಕ ಮೈಕ್ರೋ ಫೈನಾನ್ಸ್ ಲೇವಾದೇವಿ ಕಾಯ್ದೆಯನ್ನು ತಕ್ಷಣ ಅಂಗೀಕರಿಸಬೇಕು. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಋಣಮುಕ್ತ ಆಯೋಗ ಅಸ್ತಿತ್ವಕ್ಕೆ ತರಬೇಕು. ಸ್ವ-ಸಹಾಯ ಗುಂಪುಗಳ ಸ್ವರೂಪವನ್ನು ಮೊದಲಿನಂತೆ ರಕ್ಷಿಸಿಕೊಂಡು ಹೋಗುವ ಜತೆಗೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳನ್ನು ಬಲವರ್ಧನೆಗೊಳಿಸಬೇಕು. ಎಲ್ಲ ಕಿರು ಹಣಕಾಸು ಸಂಸ್ಥೆಗಳನ್ನು ನಬಾರ್ಡ್ ಹಾಗೂ ಆರ್‌ಬಿಐ ನಿಯಂತ್ರಣಕ್ಕೆ ಒಳಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಸಿದ್ಧತೆಗಳು ನಡೆದಿವೆ. ಎಲ್ಲರೂ ಧೈರ್ಯವಾಗಿ ಜೀವನ ನಡೆಸಬೇಕು. ಯಾರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.

ಸಿಐಟಿಯು ಮುಖಂಡ ಅನೂಡಿ ನಾಗರಾಜ್, ವೆಂಕಟಲಕ್ಷ್ಮಮ್ಮ, ರಾಜಮ್ಮ, ನಾಗರತ್ನಮ್ಮ, ಲಕ್ಷ್ಮೀ ಸೇರಿ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net