

ಅಕ್ಕಿಆಲೂರ: ಟ್ಯಾಂಕರ್ ಮತ್ತು ಕಾರ್ ಡಿಕ್ಕಿ ಹೊಡೆದ ಪರಿಣಾಮ ಜಿಲ್ಲಾಸ್ಪತ್ರೆ ಪ್ರಯೋಗಾಲಯದ ತಜ್ಞ ಮೃತಪಟ್ಟ ಘಟನೆ ಸಮೀಪದ ಹಾವಣಗಿ ಕ್ರಾಸ್ ಬಳಿ ಮಂಗಳವಾರ ನಡೆದಿದೆ.
ಸವಣೂರ ಪಟ್ಟಣದ ಪ್ರಸನ್ನಗೌಡ ರೇವಣೆಪ್ಪಗೌಡ ಮುದಿಗೌಡರ (32) ಮೃತ ವ್ಯಕ್ತಿ. ಹಾನಗಲ್ಲ ಪಟ್ಟಣದಲ್ಲಿರುವ ಪತ್ನಿಯ ಮನೆಗೆ ಭಾನುವಾರ ಬಂದಿದ್ದ ಪ್ರಸನ್ನಗೌಡ, ಸೋಮವಾರ ಕರ್ತವ್ಯಕ್ಕೆಂದು ಅಕ್ಕಿಆಲೂರ ಮಾರ್ಗವಾಗಿ ಹಾವೇರಿಗೆ ತೆರಳುತ್ತಿದ್ದರು. ಈ ವೇಳೆ ಬಾಳಂಬೀಡದಿಂದ ಮುಂಡಗೋಡಗೆ ತೆರಳುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಪ್ರಸನ್ನಗೌಡ ಮುದಿಗೌಡರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟ್ಯಾಂಕರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಆಡೂರ ಪಿಎಸ್ಐ ಆಂಜನಯ್ಯ, ಸಿಪಿಐ ಶಿವಶಂಕರ ಗಣಾಚಾರ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಘವೇಂದ್ರ ದೊಡ್ಡಮನಿ ಸೇರಿ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವಣೂರಿನ ಗೌಡರ ಓಣಿ ನಿವಾಸಿಯಾಗಿದ್ದ ಪ್ರಸನ್ನಗೌಡ ಪಟ್ಟಣದಲ್ಲಿ ಸ್ವಂತ ರಕ್ತ ತಪಾಸಣೆ ಕೇಂದ್ರ ಇಟ್ಟುಕೊಂಡಿದ್ದರು. ಮೂರು ವರ್ಷಗಳಿಂದ ಹಾವೇರಿ ಜಿಲ್ಲಾಸ್ಪತ್ರೆ ಪ್ರಯೋಗಾಲಯದ ತಜ್ಞರಾಗಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಗೆ ತಂದೆ, ತಾಯಿ ಪತ್ನಿ ಸೇರಿ ಅಪಾರ ಬಂಧು- ಬಳಗವಿದೆ.