ಪ್ರಾಮಾಣಿಕವಾಗಿ ಸಾವಿನ ಪ್ರಕರಣದ ತನಿಖೆ

9-kgl-2..,
Published on

ಕೊಳ್ಳೇಗಾಲ: ಮೃತ ನಂದೀಶ್ ಸಾವಿನ ಪ್ರಕರಣದ ತನಿಖೆ ನ್ಯಾಯಬದ್ಧವಾಗಿ, ಪ್ರಾಮಾಣಿಕವಾಗಿ ನಡೆಯುತ್ತದೆ. ಇದರಲ್ಲಿ ಅನುಮಾನ ಬೇಡ. ಮೃತನ ಸಂಬಂಧಿಕರನ್ನು ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ವಿಚಾರವೂ ತನಿಖೆಯಾಗಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.


ಪಟ್ಟಣದ ಲಿಂಗಣಾಪುರ ಗ್ರಾಮದಲ್ಲಿರುವ ಮೃತ ನಂದೀಶ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿದ ಅವರು, ನಾನು ನ್ಯಾಯದ ಪರವಾಗಿದ್ದೇನೆ. ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ನಂದೀಶ್ ಸಾವಿನ ಪ್ರಕರಣ ಬಗ್ಗೆ ಬೆಂಗಳೂರು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಾರೆ. ಅಲ್ಲದೆ, ಸಂತ್ರಸ್ತ ಕುಟುಂಬದವರ ಜತೆ ಸ್ಥಳೀಯ ಪಿಎಸ್‌ಐ ಸೌಜನ್ಯದಿಂದ ವರ್ತಿಸಿಲ್ಲ ಎಂಬುದರ ಬಗ್ಗೆ ಎಸ್ಪಿ ಅವರಿಗೆ ಹೊರಗಿನ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಿ ಕ್ರಮವಹಿಸುವಂತೆ ಸೂಚಿಸಿದ್ದೇನೆ. ನಂದೀಶ್ ಸಾವಿನ ಪ್ರಕರಣದಲ್ಲಿ ಒಳಗೊಂಡ ಎಲ್ಲರ ಮೇಲು ತನಿಖೆಯಾಗಲಿದೆ ಎಂದು ಭರವಸೆ ನೀಡಿದರು.


ಬಿಜೆಪಿ ಜಿಲ್ಲಾ ವಕ್ತಾರ ಬಸವರಾಜಪ್ಪ ಮಾತನಾಡಿ, ಮೃತನ ಅಂತ್ಯಕ್ರಿಯೆ ನಡೆಸಲು ಸೋಮವಾರ ಬರುವಾಗ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಬಳಿ ಹಾಗೂ ನರೀಪುರ ಬಳಿ ಪೊಲೀಸರು ತಡೆದು ಮೃತದೇಹಕ್ಕೆ ಅಗೌರವ ತೋರಿದ್ದಾರೆ ಎಂದು ದೂರಿದರು.


ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಜಿ.ಯು.ಸೋಮೇಗೌಡ, ಪೊಲೀಸ್ ಠಾಣೆಯ ಎದುರು ಮೃತದೇಹ ತರುವ ಮಾಹಿತಿ ದೊರೆತಿತ್ತು. ಪ್ರತಿಭಟನೆಯಲ್ಲೂ ಮೃತದೇಹವನ್ನು ಇಲ್ಲಿಗೆ ತರುವಂತೆ ಘೋಷಣೆ ಕೂಗಿದ್ದರು. ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗದಂತೆ ಕ್ರಮವಹಿಸಿದ್ದೇವೆ. ಯಾವುದೇ ರೀತಿ ಅಗೌರವ ನೀಡಿಲ್ಲ ಎಂದು ಸಮಜಾಯಿಷಿ ನೀಡಿದರು. ಇದಕ್ಕೊಪ್ಪದ ಸಾರ್ವಜನಿಕರು ಅಗೌರವ ನೀಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಪೊಲೀಸರು ನೊಂದವರು ಬಂದಾಗ ತಕ್ಷಣ ಕ್ರಮವಹಿಸಬೇಕಿತ್ತು. ಮೇಲಧಿಕಾರಿಗಳು ಸ್ಥಳಕ್ಕೆ ಬರಬೇಕಿತ್ತು. ಇವೆಲ್ಲವೂ ವೈಫಲ್ಯ ಅಲ್ಲವೆ ಎಂದು ಡಿವೈಎಸ್ಪಿ ಅವರಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ಇಲ್ಲಿನ ಪೊಲೀಸ್ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಎಂದು ಸಂತ್ರಸ್ತರು ಕೊಟ್ಟ ಲಿಖಿತ ದೂರಿನ ಮನವಿ ಪತ್ರವನ್ನು ಮೇಲಧಿಕಾರಿಗೆ ಕಳುಹಿಸಿದ್ದೇವೆ ಎಂದರು.


ವೀರಶೈವ ಮಹಾಸಭಾ ಜಿಲ್ಲಾ ನಿರ್ದೇಶಕ ವೀರಭದ್ರಸ್ವಾಮಿ ಮಾತನಾಡಿ, ಮೃತನ ಸಂಬಂಧಿಕನಾದ ಯುವಕನೊಬ್ಬನಿಗೆ ಪಟ್ಟಣ ಪಿಎಸ್‌ಐ ಮಹೇಶ್‌ಕುಮಾರ್ ಧಮ್ಕಿ ಹಾಕಿ ರೌಡಿಶೀಟರ್ ಮಾಡುತ್ತೇನೆ ಎಂದು ಹೆದರಿಸಿದ್ದಾರೆ. ಇಂತಹ ಅಧಿಕಾರಿ ಜಿಲ್ಲೆಯೊಳಗೆ ಇರಬಾರದು. ಆ ಅಧಿಕಾರಿ ಇಲ್ಲಿಯೇ ಕರ್ತವ್ಯದಲ್ಲಿ ಮುಂದುವರಿದರೆ ಜಿಲ್ಲಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದರು.


ಈ ವೇಳೆ ನಂದೀಶ್ ತಂದೆ ಮಹದೇವಪ್ಪ ಹಾಗೂ ತಾಯಿ ಶಾಸಕರಿಗೆ ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಸಿಪಿಐ ಕೃಷ್ಣಪ್ಪ, ನಗರಸಭೆ ಸದಸ್ಯ ರಾಮಕೃಷ್ಣ, ಪ್ರಕಾಶ್, ಮುಖಂಡ ನರಸಿಂಹ, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net