ಆಲೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಒಂದೇ ಕುಟುಂಬದ ಐವರನ್ನು ಆಲೂರು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಪಟ್ಟಣದ ಖಾಜಿ ಮೊಹಲ್ಲದ ಶ್ರೀ ರಾಮಮಂದಿರದ ಬಳಿ ವಾಸವಿರುವ ಸಲೀಲ್ ಶರೀಫ್(61) ಪತ್ನಿ ನೂರುನ್ನಿಸಾ (52), ಮಕ್ಕಳಾದ ಶಯ್ಯಸ್ ಶರೀಫ್, ಶಹಬಾಸ್ ಶರೀಫ್(25) ದಾನೀಷ್ ಶರೀಫ್ (21) ಬಂಧಿತರು.
ಆರೋಪಿಗಳ ಕುಟುಂಬ ಮತ್ತು ಹಲ್ಲೆಗೊಳಗಾದ ಕಾರಿನ ಚಾಲಕ ಎ. ವೈ. ಮಹೇಶ ನಡುವೆ ಜಮೀನು ವಿಷಯದಲ್ಲಿ ಹಲವು ವರ್ಷಗಳಿಂದ ಆಗಾಗ ಗಲಾಟೆ ನಡೆಯುತ್ತಿತ್ತು. ಅಂತೆಯೆ, ಬುಧವಾರ ರಾತ್ರಿ ಮಹೇಶ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ಅಡ್ಡಗಟ್ಟಿದ ಆರೋಪಿಗಳು ಮಹೇಶನನ್ನು ಕಾರಿನಿಂದ ಹೊರಗೆಳೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದರು. ಈ ಸಂದರ್ಭ ಸ್ಥಳೀಯ ನಿವಾಸಿಗಳು ಮಧ್ಯ ಪ್ರವೇಶಿಸಿ ಗಲಾಟೆಯನ್ನು ಬಿಡಿಸಿ ಮಹೇಶನನ್ನು ಆಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ಕೈಗೊಂಡ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾಧರ್ ನೇತೃತ್ವದ ತಂಡದ ಪೊಲೀಸರು ಆರೋಪಿಗಳ ಪೈಕಿ ಸಲೀಲ್ ಶರೀಫ್, ಪತ್ನಿ ನೂರುನ್ನಿಸಾ, ಮಕ್ಕಳಾದ ಡ್ಯಾನಿಷ್ ಶರೀಫ್, ಶಹಬಾಜ್ ಶರೀಫ್ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮತ್ತೊಬ್ಬ ಆರೋಪಿ ಶಯ್ಯಸ್ ಶರೀಫ್ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.