

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಸರ್ವೆ ಸೇತುವೆಯ ಬಳಿ ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯ ಪಕ್ಕದ ಗೌರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾದ ಕುದ್ಮಾರು ಗ್ರಾಮದ ಯುವಕನ ಮೃತದೇಹ ಭಾನುವಾರ ಮಧ್ಯಾಹ್ನ ವೇಳೆ ಸೇತುವೆಯ ಪಕ್ಕ ಪತ್ತೆಯಾಗಿದೆ.
ಕುದ್ಮಾರು ಗ್ರಾಮದ ತೆಕ್ಕಿತ್ತಡ್ಕ ನಿವಾಸಿ ಚಂದ್ರ ಗೌಡ ಎಂಬುವರ ಪುತ್ರ ಸನ್ಮಿತ್(21) ಆತ್ಮಹತ್ಯೆ ಮಾಡಿಕೊಂಡವ. ಶನಿವಾರ ದಿನವಿಡೀ ಬೋಟ್ ಬಳಸಿ ಶೋಧ ಕಾರ್ಯ ನಡೆಸಿದರೂ ಸನ್ಮಿತ್ ಸುಳಿವು ಲಭಿಸಿರಲಿಲ್ಲ. ಭಾನುವಾರ ಬೆಳಗ್ಗೆ ಮತ್ತೆ ಅಗ್ನಿಶಾಮಕದಳ ಶೋಧ ಕಾರ್ಯಮುಂದುವರಿಸಿದ್ದರು. ಭಾನುವಾರ ರಾಜ್ಯ ವಿಪತ್ತು ನಿರ್ವಹಣಾ ಘಟಕ ಕರೆಸಿಕೊಳ್ಳಲಾಗಿತ್ತು. ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸನ್ಮಿತ್ ಮೃತದೇಹ ದೊರಕಿತ್ತು.
ಅಕ್ಟೋಬರ್‌ನಲ್ಲಿ ಬಿದ್ದು ಅವರ ತಲೆಗೆ ಏಟಾಗಿತ್ತು. ಗಾಯ ವಾಸಿಯಾಗಿದ್ದರೂ ಬಳಿಕ ಮರೆವಿನ ಸಮಸ್ಯೆ ಎದುರಾಗಿತ್ತು. ಇದೇ ಕಾರಣಕ್ಕೆ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.