ಯುವಕ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

sanmith
ನಾಪತ್ತೆಯಾಗಿರುವ ಸನ್ಮಿತ್, ಗೌರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯ ಮೇರೆಗೆ ಅಗ್ನಿಶಾಮಕದಳದವರು ಹಾಗೂ ಮುಗುಳುತಜ್ಞರು ಬೋಟ್ ಬಳಸಿಕೊಂಡು ಹೊಳೆಯಲ್ಲಿ ಹುಡುಕಾಟ ನಡೆಸಿದರು
Published on

ಪುತ್ತೂರು ಗ್ರಾಮಾಂತರ: ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಸರ್ವೆ ಎಂಬಲ್ಲಿರುವ ರೈಲ್ವೆ ಮೇಲ್ಸೇತುವೆಯ ಸಮೀಪ ಗೌರಿ ಹೊಳೆಗೆ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿನ ಶೋರೂಂನ ಉದ್ಯೋಗಿ, ಕಡಬ ತಾಲೂಕಿನ ಕುದ್ಮಾರು ಗ್ರಾಮದ ತೆಕ್ಕಿತ್ತಡ್ಕ ನಿವಾಸಿ ಚಂದ್ರ ಗೌಡ ಪುತ್ರ ಸನ್ಮಿತ್(21) ನಾಪತ್ತೆಯಾಗಿರುವ ಯುವಕ.

ಸ್ಕೂಟರ್, ಹೆಲ್ಮೆಟ್, ರೈನ್‌ಕೋಟ್, ಮೊಬೈಲ್ ಫೋನ್, ಪರ್ಸ್, ಟಿಫಿನ್ ಬಾಕ್ಸ್ ಪತ್ತೆ

ರೈಲ್ವೆ ಮೇಲ್ಸೇತುವೆ ಸಮೀಪ ರಸ್ತೆ ಬದಿಯಲ್ಲಿರುವ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿ ಸನ್ಮಿತ್ ಸ್ಕೂಟರ್, ಹೆಲ್ಮೆಟ್, ರೈನ್‌ಕೋಟ್, ಮೊಬೈಲ್ ಫೋನ್, ಪರ್ಸ್, ಟಿಫಿನ್ ಬಾಕ್ಸ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆತ ಹೊಳೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸನ್ಮಿತ್ ಶುಕ್ರವಾರ ಬಂದು ಕರ್ತವ್ಯ ನಿರ್ವಹಿಸಿ ಸಂಜೆ ತಂದೆಗೆ ಕರೆ ಮಾಡಿ ಮನೆಗೆ ತಲುಪುವಾಗ ರಾತ್ರಿ 10 ಗಂಟೆಯಾಗಬಹುದು ಎಂದು ತಿಳಿಸಿದ್ದರು.

ರಾತ್ರಿ 11 ಗಂಟೆಯಾದರೂ ಮನೆಗೆ ತಲುಪದ ಹಿನ್ನೆಲೆ ತಂದೆ ಚಂದ್ರ ಗೌಡ ಮತ್ತೆ ಸನ್ಮಿತ್‌ಗೆ ಹಲವು ಬಾರಿ ಕರೆ ಮಾಡಿದರೂ ಆತ ಮೊಬೈಲ್ ಕರೆ ಸ್ವೀಕರಿಸಿರಲಿಲ್ಲ. ಗಾಬರಿಗೊಂಡ ಮನೆಮಂದಿ ಆತನಿಗಾಗಿ ಹುಡುಕಾಟ ಆರಂಭಿಸಿದ್ದು, ಪುತ್ತೂರು ಕಡೆಗೆ ಬರುತ್ತಿದ್ದ ವೇಳೆ ಸರ್ವೆ ಗೌರಿ ಹೊಳೆ ಪಕ್ಕದ ಪ್ರಯಾಣಿಕರ ಬಸ್ ತಂಗುದಾಣದ ಬಳಿ ಸ್ಕೂಟರೊಂದು ಪತ್ತೆಯಾಗಿತ್ತು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂಪ್ಯ ಠಾಣೆ ಪೊಲೀಸರು ರಾತ್ರಿ ವೇಳೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಲ್ಲಿದ್ದ ಸ್ಕೂಟರ್, ವಸ್ತುಗಳು ಸನ್ಮಿತ್‌ಗೆ ಸೇರಿದ್ದೆಂದು ಖಚಿತಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಆತ ಹೊಳೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಮೇಲೆ ಹುಡುಕಾಟ ಆರಂಭಿಸಲಾಗಿದೆ. ಸಂಪ್ಯ ಪೊಲೀಸ್ ಠಾಣೆಯ ಎಸ್‌ಐ ಜಂಬೂರಾಜ್ ಮಹಾಜನ್ ಅವರ ನೇತೃತ್ವದಲ್ಲಿ ಸಂಪ್ಯ ಪೊಲೀಸ್ ಠಾಣೆ ಸಿಬ್ಬಂದಿ, ಪುತ್ತೂರು ಅಗ್ನಿಶಾಮಕ ದಳದವರು, ಕಂದಾಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದರ‌್ದು, ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಮುಳುಗು ತಜ್ಞರು ಸೇರಿಕೊಂಡು ಹೊಳೆ ನೀರಿನಲ್ಲಿ ಸನ್ಮಿತ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಬೋಟ್ ಬಳಸಿಕೊಂಡು ಹೊಳೆಯುದ್ದಕ್ಕೂ ಮೂರು ರೌಂಡ್ ಹುಡುಕಾಟ ನಡೆಸಿದ್ದರೂ ಸಂಜೆ ತನಕ ಸನ್ಮಿತ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಮರೆವು ಸಮಸ್ಯೆಯಿತ್ತು

ಸನ್ಮಿತ್ ನಾಪತ್ತೆಯಾಗಿರುವ ಕುರಿತು ತಂದೆ ಚಂದ್ರ ಗೌಡ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2023ನೇ ಅ.17ರಂದು ಬಿದ್ದು ಸನ್ಮಿತ್ ತಲೆಗೆ ಏಟಾಗಿತ್ತು. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲಾಗಿದ್ದರೂ ಆ ಬಳಿಕ ಆತನಿಗೆ ಮರೆವಿನ ಸಮಸ್ಯೆ ಇತ್ತು ಎಂದು ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net