

ಹಿರಿಕರ ರವಿ ಸೋಮವಾರಪೇಟೆ
ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ಅತಿವೃಷ್ಟಿ, ಕಾಡುಪ್ರಾಣಿಗಳಿಂದ ಬೆಳೆಹಾನಿ ಇವೆಲ್ಲದಕ್ಕೂ ಸೆಡ್ಡು ಹೊಡೆದು, ಕಳೆದ 40 ವರ್ಷಗಳಿಂದ ಕೃಷಿಯಲ್ಲೇ ನೆಮ್ಮದಿ ಬದುಕು ಕಟ್ಟಿಕೊಂಡ ಸಾಧಕ, ಪ್ರಗತಿಪರ ಕೃಷಿಕ ಅಬ್ಬೂರುಕಟ್ಟೆ ಗ್ರಾಮದ ಎಸ್.ಎಂ.ಡಿಸಿಲ್ವಾ.
ಕೃಷಿಯೊಂದಿಗೆ ಸಮಾಜಸೇವೆಯಲ್ಲೂ ಗುರುತಿಸಿಕೊಂಡಿರುವ ಡಿಸಿಲ್ವಾ ಕೃಷಿಗೆ ವಿಶೇಷ ಕಾಳಜಿಯನ್ನು ನೀಡುತ್ತಿದ್ದಾರೆ. 30 ಎಕರೆ ಭೂಮಿಯಲ್ಲಿ ಕಾಫಿ, ಕಾಳುಮೆಣಸು ಮತ್ತು ಅಡಕೆ ಕೃಷಿ ಮಾಡಿದ್ದಾರೆ. ಅಕಾಲಿಕ ಮಳೆಯಿಂದ ಕಾಫಿ ಫಸಲು ಕೈಕೊಟ್ಟ ಸಂದರ್ಭ ಕಾಳುಮೆಣಸು, ಅಡಕೆ ಫಸಲು ಕೈಹಿಡಿದ ಹಿನ್ನೆಲೆ ನಷ್ಟದ ಆತಂಕ ಎದುರಾಗಿಲ್ಲ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿ ಲಾಭದಾಯಕವಾಗಿಲ್ಲ ಎಂದು ಬಹುತೇಕ ಕೃಷಿಕರು ಭತ್ತದ ಗದ್ದೆಯನ್ನು ಸಮತಟ್ಟು ಮಾಡಿ, ಕಾಫಿ, ಅಡಕೆ ತೋಟ ಮಾಡುತ್ತಿರುವ ಸಂದರ್ಭದಲ್ಲಿ ಇಂದಿಗೂ ಒಂದೂವರೆ ಎಕರೆ ಜಾಗದಲ್ಲಿ ಭತ್ತ ಕೃಷಿಯನ್ನು ಮಾಡುತ್ತ ಉತ್ತಮ ಫಸಲು ಪಡೆಯುತ್ತಿದ್ದಾರೆ.
30 ಎಕರೆ ಕಾಫಿ ತೋಟದಲ್ಲಿ 50 ಕೆ.ಜಿ.ತೂಕದ 160 ಚೀಲ ಪಾರ್ಚ್‌ಮೆಂಟ್ ಕಾಫಿ, 100 ಚೀಲ ಚೆರ‌್ರಿ ಕಾಫಿ ಬೆಳೆದಿದ್ದಾರೆ. 50 ಕ್ವಿಂಟಾಲ್ ಕಾಳುಮೆಣಸು ಫಸಲನ್ನು ಪಡೆದಿದ್ದಾರೆ.
ಕೃಷಿಯೊಂದಿಗೆ ಕೋಳಿ, ಹಂದಿ ಸಾಕಣೆ ಮಾಡುತ್ತಾರೆ. ಹೈನುಗಾರಿಕೆಯಲ್ಲೂ ಯಶ ಕಂಡಿದ್ದಾರೆ. ಸಗಣಿ ಗೊಬ್ಬರ, ಕೋಳಿ ಗೊಬ್ಬರವನ್ನು ಕೃಷಿ ಭೂಮಿಗೆ ಹಾಕಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ಒಂದಷ್ಟು ಜಾಗದಲ್ಲಿ ಸಾವಯವ ಕೃಷಿಯನ್ನು ಮಾಡುತ್ತ ಉತ್ತಮ ಫಸಲು ತೆಗೆಯುತ್ತಿದ್ದಾರೆ.
ಅಬ್ಬೂರುಕಟ್ಟೆಯಲ್ಲಿ ಕೋಳಿ ಮಾಂಸದ ಮಳಿಗೆಯನ್ನು ಹೊಂದಿದ್ದಾರೆ. ಈ ಹಿಂದೆ ಕೋಳಿ ಆಹಾರ, ಕೋಳಿ ಮರಿಗಳನ್ನು ಮಾರಾಟ ಮಾಡುತ್ತಿದ್ದರು. ವ್ಯಾಪಾರದಿಂದ ಗಳಿಸಿದ ಹಣವನ್ನು ಸಂಪೂರ್ಣವಾಗಿ ಕೃಷಿಗೆ ಉಪಯೋಗಿಸುತ್ತಿದ್ದರು. ಈಗ ಕೃಷಿಯೂ ಲಾಭದಾಯಕವಾಗಿದೆ. ಕೋಳಿಗಳಿಗೆ ಆ್ಯಂಟಿಬಯೋಟಿಕ್, ವ್ಯಾಕ್ಸಿನ್, ಹಾರ್ಮೋನ್ ಹಾಕದೆ ಸಾಕುತ್ತಿದ್ದೇವೆ ಎಂದು ಹೇಳಿದರು.
ಪ್ರಾರಂಭದಲ್ಲಿ ಅರೇಬಿಕಾ ಕಾಫಿ ಗಿಡಗಳನ್ನು ಹಾಕಿದ್ದರು. ಬಿಳಿಕಾಂಡಕೊರಕ ಹಾವಳಿಯಿಂದ ಪ್ರತಿವರ್ಷ ನಷ್ಟ ಅನುಭವಿಸಬೇಕಾಗಿತ್ತು. ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಿದ್ದ ಹಿನ್ನೆಲೆ ಕೊಳೆರೋಗ ನಿಯಂತ್ರಣ ಸವಾಲಾಗಿತ್ತು. ಕೆಲ ವರ್ಷ ಕಾಫಿಗೆ ಉತ್ತಮ ಬೆಲೆಯೂ ಸಿಗುತ್ತಿರಲಿಲ್ಲ. ಕಾರ್ಮಿಕರ ಸಮಸ್ಯೆ, ದುಪ್ಪಟ್ಟು ಕೂಲಿ ಹಿನ್ನೆಲೆಯಲ್ಲಿ ಕಾಫಿ ಲಾಭದಾಯಕವಾಗಿರಲಿಲ್ಲ.
ಯಾವುದಕ್ಕೂ ಎದೆಗುಂದದ ಡಿಸಿಲ್ವಾ ಅವರು, ಹೊಸ ತಳಿಯ ಕಾಫಿ ಗಿಡಗಳನ್ನು ಹಾಕಲು ಪ್ರಾರಂಭಿಸಿದರು. ರೋಬಸ್ಟಾ ಕಾಫಿ ಬೆಳೆಯುವ ಪ್ರಯತ್ನ ಮಾಡಿದರು. ಹೈಬ್ರಿಡ್ ತಳಿಯ ಚಂದ್ರಗಿರಿ ಕಾಫಿಯನ್ನು ಪರಿಚಯಿಸಿದರು. ಅಡಕೆ, ನಿಂಬೆಹಣ್ಣು ಫಸಲು ಸಿಗಲು ಪ್ರಾರಂಭಿಸಿದೆ. ಈಗ ಕೃಷಿ ಕೈಹಿಡಿದಿದೆ. ಬಟರ್ ಫ್ರೂಟ್ ಬೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪತ್ನಿ ಸಿಂಥಿಯಾ ಡಿಸಿಲ್ವಾ ಹೈನುಗಾರಿಕೆ ಮತ್ತು ಹಂದಿ, ಕೋಳಿ ಸಾಕಣೆಯ ಜವಾಬ್ದಾರಿ ನೋಡಿಕೊಳ್ಳುತ್ತಾರೆ. ಮಕ್ಕಳಾದ ಸ್ಟಾಲಿನ್ ಡಿಸಿಲ್ವಾ ಎಂಸಿಎ, ಇನ್ನೊಬ್ಬ ಮಗ ಆ್ಯರೆನ್ ಡಿಸಿಲ್ವಾ ಬಿ.ಇ.(ಎಲೆಕ್ಟ್ರಿಕಲ್) ಪದವಿ ಪಡೆದುಕೊಂಡಿದ್ದು, ಇಡೀ ಕುಟುಂಬ ಕೃಷಿಯಲ್ಲೇ ತೊಡಗಿಕೊಂಡಿದೆ.
ಸಾವಯವ ಮಾದರಿಯಲ್ಲಿ ಬೆಳೆದ ಕಾಫಿಯನ್ನು ಸಂಗ್ರಹಿಸಿ, ಸಂಸ್ಕರಿಸಿ ಕಾಫಿ ಪುಡಿ ತಯಾರಿಸಿ, ಸರಬರಾಜು ಮಾಡುತ್ತಿದ್ದಾರೆ. ತಾವು ಬೆಳೆದ ಭತ್ತವನ್ನು ಊಟಕ್ಕೆ ಉಪಯೋಗಿಸಿಕೊಂಡು ಉಳಿದ ಭತ್ತವನ್ನು ಮಾರಾಟ ಮಾಡುತ್ತಾರೆ.
ಸಮಾಜ ಸೇವೆಗೂ ಸೈ: ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಎಸ್.ಎಂ.ಡಿಸಿಲ್ವಾ ಅವರು, ಸೋಮವಾರಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ನೇರುಗಳಲೆ ಶಾಲೆಯ ಹಳೇ ವಿದ್ಯಾರ್ಥಿಗಳ ಅಂಕುರಂ ಟ್ರಸ್ಟ್ ನಿರ್ದೇಶಕರಾಗಿದ್ದಾರೆ. ಟ್ರಸ್ಟ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿತ್ತು. ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ.
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್‌ನ ಜಿಲ್ಲಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಕೊಡಗು ಜಿಲ್ಲಾ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಸೋಮವಾರಪೇಟೆ ಭುವನಮಂದಾರ ರೈತ ಉತ್ಪಾದಕರ ಸಂಸ್ಥೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ ಅನೇಕ ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಿಸಿಲ್ವಾ ಅವರು ಎಲ್ಲ ಸಮುದಾಯದವರೊಂದಿಗೆ ಅನೋನ್ಯವಾಗಿದ್ದಾರೆ.