

ಬೆಳ್ತಂಗಡಿ: ಕುಡಿತ ಪ್ರವಾಹ ಬಂದಾಗ ಕೊಚ್ಚಿ ಹೋದ ಹಾಗೆ. ಎಷ್ಟು ದುಡಿಮೆ ಮಾಡಿ ಸಂಪಾದನೆ ಮಾಡಿದರೂ ಪ್ರಯೋಜನಕ್ಕೆ ಬರುವುದಿಲ್ಲ. ಉಳಿತಾಯ ಮನೋಭಾವನೆ ಬರುವಂಥ ಆಸೆ ಹುಟ್ಟುವುದೆ ಈ ಶಿಬಿರಕ್ಕೆ ಸೇರಿ ಪಾನಮುಕ್ತರಾದ ಮೇಲೆ. ಒಮ್ಮೆ ವ್ಯಸನಕ್ಕೆ ಬಲಿಯಾದರೆ ಅದನ್ನು ನೀವು ಬಿಡಲು ಮನಸ್ಸು ಮಾಡಿದರೂ ಅದು ನಿಮ್ಮನ್ನು ಬಿಡುವುದಿಲ್ಲ. ಹಾಗಾಗಿ ಒಮ್ಮೆ ತಪ್ಪುದಾರಿಗೆ ಹೋಗಿರುವುದು ಸಹಜ. ಆದರೆ ತಪ್ಪನ್ನು ತಿದ್ದಿಕೊಳ್ಳುವುದು ಮನುಜ ಧರ್ಮ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 230ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಆಗಮಿಸಿದ 63 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಶಿಬಿರದಿಂದ ನಿಮ್ಮ ಊರಿಗೆ ಹೋದ ಸಂದರ್ಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವೇಳೆ ಮತ್ತೆ ವ್ಯಸನಕ್ಕೆ ಬೀಳದಂತೆ ಜಾಗರೂಕತೆಯಿಂದ ಇರುವುದು ಬಹಳ ಮುಖ್ಯ. ಇನ್ನು ಮುಂದಕ್ಕೆ ಕುಡಿಯುವುದಿಲ್ಲ ಎಂದು ಆತ್ಮವಿಶ್ವಾಸದಿಂದ, ದೃಢ ಸಂಕಲ್ಪದಿಂದ ಇದ್ದರೆ ಕೌಟಂಬಿಕವಾಗಿ, ಸಾಮಾಜಿಕವಾಗಿ, ವೈಯಕ್ತಿಕವಾಗಿ ನೆಮ್ಮದಿಯಿಂದ ಜೀವನ ನಡೆಸಬಹುದು ಎಂದರು.
ಶಿಬಿರದ ಕುಟುಂಬ ದಿನ ಕಾರ್ಯಕ್ರಮ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ನಡೆಸಿಕೊಟ್ಟರು. ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ನಾಗೇಂದ್ರ, ಆರೋಗ್ಯ ಸಹಾಯಕ ವೆಂಕಟೇಶ್ ಸಹಕರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್ ಉಪಸ್ಥಿತರಿದ್ದರು. ಮುಂದಿನ ವಿಶೇಷ ಶಿಬಿರ ಸೆ.9 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.