

ವಿನಯ್ ಉಪ್ಪಿನಂಗಡಿ
ಆರೋಗ್ಯ ಸಂಬಂಧಿ ಸಮಸ್ಯೆಗೆ ತುತ್ತಾದವರಿಗೆ ತುರ್ತು ಸೇವೆ ಒದಗಿಸಲೆಂದು ಅನುಷ್ಠಾನಿಸಿದ ಆರೋಗ್ಯ ಕವಚ 108 ಆಂಬುಲೆನ್ಸ್ ಕುಡಿದು ಅಸ್ವಸ್ಥರಾಗುವ ಮಂದಿಯನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಕ್ಕೆ ಹೆಚ್ಚು ಬಳಕೆಯಾಗುತ್ತಿರುವುದರಿಂದ ನೈಜ ಆರೋಗ್ಯ ಸಮಸ್ಯೆಯುಳ್ಳವರು ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸೇವೆ ಸಿಗದೆ ಅಸಹಾಯಕರಾಗುತ್ತಿದ್ದಾರೆ.
ಉಪ್ಪಿನಂಗಡಿಯಲ್ಲಿ ಕಳೆದ ಕೆಲ ಸಮಯದಿಂದ ಅಲೆಮಾರಿ ಕುಡುಕರ ಸಮಸ್ಯೆ ನಿತ್ಯ ನಿರಂತರವೆಂಬಂತಿದ್ದು, ಕುಡಿದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದಾಗ ತೀವ್ರ ಅಸ್ವಸ್ಥರಾದರೆಂದು 108ಕ್ಕೆ ಕರೆ ಮಾಡಿ ಅವರನ್ನು ಆಸತ್ರೆಗೆ ದಾಖಲಿಸಲಾಗುತ್ತಿದೆ. ಅಲ್ಲಿ ಗ್ಲೂಕೋಸ್ ನೀಡಿ ಶುಶ್ರೂಷೆ ಮಾಡಲಾಗುತ್ತದೆ. ಚೇತರಿಸಿದ ಬಳಿಕ ಅವರು ಮತ್ತೆ ನೇರವಾಗಿ ಮದ್ಯದಂಗಡಿಗೆ ಹೋಗಿ ಪೇಟೆಯಲ್ಲಿ ತೂರಾಡುತ್ತಿರುತ್ತಾರೆ. ಇತ್ತೀಚಿನ ಕೆಲ ದಿನಗಳಿಂದ ಉಪ್ಪಿನಂಗಡಿಯಲ್ಲಿ ಮೂವರು ಕುಡುಕರ ಸಮಸ್ಯೆ ಮೇರೆ ಮೀರಿದ್ದು, ಕಂಡಕಂಡಲ್ಲಿ ಮಲ ವಿಸರ್ಜನೆ, ತೀರಾ ಅಸ್ವಸ್ಥರಾದಾಗ ಉಟ್ಟ ಬಟ್ಟೆಯಲ್ಲೇ ಮಲ ವಿಸರ್ಜನೆ ಮಾಡಿ ಅಸಹ್ಯಕರ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾಗ ಅವರನ್ನು ಸ್ವಚ್ಛಗೊಳಿಸುವ ಕಾರ್ಯ 108ಆರೋಗ್ಯ ರಕ್ಷಾ ಕವಚದ ಸಿಬ್ಬಂದಿಯದ್ದಾಗಿದೆ. ಮದ್ಯ ಸೇವನೆಯಂತಹ ಸ್ವಯಂಕೃತ ಅಸ್ವಸ್ಥತೆಗೆ ಒಳಗಾದವರನ್ನು ನಿಯಂತ್ರಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಜಿಲ್ಲೆಯಲ್ಲಿ ಇಲ್ಲದ ಕಾರಣ, ಆಸ್ಪತ್ರೆಯಲ್ಲಿ ಯಾರ ನಿಯಂತ್ರಣಕ್ಕೂ ಸಿಗದೆ ಮಲಗಿದ್ದಲ್ಲಿಂದಲೇ ಎದ್ದು ಪರಾರಿಯಾಗುವ ಇಂತಹ ಕುಡುಕರ ಸೇವೆಯಲ್ಲೇ ದಿನ ಕಳೆಯುವ ಸ್ಥಿತಿ ಸಿಬ್ಬಂದಿಯದ್ದಾಗಿದೆ.
ಕೆಲ ದಿನಗಳ ಹಿಂದೆ ನವಜಾತ ಶಿಶು ಉಸಿರಾಟದ ಸಮಸ್ಯೆಗೆ ಸಿಲುಕಿ ತುರ್ತು ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಗೆ ಸಿಲುಕಿದಾಗ ಈ ಕುಡುಕರ ಕಾರಣಕ್ಕಾಗಿ 108 ಆಂಬುಲೆನ್ಸ್ ಸೇವೆಗೆ ಲಭಿಸಿರಲಿಲ್ಲ. ನಿಯಮದ ಪ್ರಕಾರ ಮೊದಲು ದಾಖಲಾದ ಪ್ರಕರಣಕ್ಕೆ ಮೊದಲ ಪ್ರಾಶಸ್ತ್ಯ ಎಂಬ ನೀತಿಯಿಂದಾಗಿ 108 ಅಂಬುಲೆನ್ಸ್ ಸಿಬ್ಬಂದಿ ಕುಡುಕರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರೆ, ನವಜಾತ ಶಿಶುವನ್ನು ತಜ್ಞರಿಲ್ಲದ ಸಾಮಾನ್ಯ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವ ದುಸ್ಥಿತಿ ಒದಗಿತ್ತು.
ಈ ಕಾರಣಕ್ಕೆ ನಾಗರಿಕ ಸಮಾಜಕ್ಕೆ ಮುಜುಗರ ಮೂಡಿಸುವ ರೀತಿಯಲ್ಲಿ ಪದೇಪದೆ ಅಸ್ವಸ್ಥರಾಗುವ ಕುಡುಕ ಅಲೆಮಾರಿಗಳನ್ನು ನಿಯಂತ್ರಿಸಿ ಅವರನ್ನು ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡುವ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗಬೇಕಾಗಿದೆ.
108 ಆಂಬುಲೆನ್ಸ್ ಇರುವುದೇಸಾರ್ವಜನಿಕರ ಉಪಯೋಗಕ್ಕೆ. ಸೇವೆ ಸಮರ್ಪಕವಾಗಿ ದೊರೆಯುವಂತಾಗಲು ಕೆಲವೊಂದು ನಿಯಮಗಳು ಜಾರಿಯಲ್ಲಿವೆ. ಅದರ ಲಾಭ ಬುದ್ಧಿಗೇಡಿ ಯಾ ಕುಡುಕರಿಗೆ ಮಾತ್ರ ಆಗುತ್ತಿದೆ ಎನ್ನುವುದು ವಿಪರ್ಯಾಸ. ನಿಜವಾದ ಆರೋಗ್ಯ ಸಮಸ್ಯೆ ಮತ್ತು ತುರ್ತು ಸಮಸ್ಯೆಗೆ ಒಳಗಾದವರಿಗೆ 108 ಆಂಬುಲೆನ್ಸ್ ಸೇವೆ ಆದ್ಯತೆಯ ನೆಲೆಯಲ್ಲಿ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ನಾಗರಿಕ ಸಮಾಜ ಸಮಸ್ಯೆಯನ್ನು ಅರ್ಥೈಸಿ ಸೇವೆಯನ್ನು ಬಳಸಿಕೊಳ್ಳಬೇಕಾಗಿದೆ. ಕುಡುಕ ನಿರ್ಗತಿಕರ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. - ಯು.ಟಿ ಇರ್ಷಾದ್, ಸಾಮಾಜಿಕ ಕಾರ್ಯಕರ್ತ ಸರ್ಕಾರ ತನಗೆ ಆದಾಯ ಬರಬೇಕೆಂದು ಮದ್ಯ ಮಾರಾಟಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿದೆ. ಇದರಿಂದಾಗಿ ಹಲವಾರು ಮಂದಿ ಮದ್ಯ ವ್ಯಸನಿಗಳಾಗಿ ಬದುಕು ಕೆಡಿಸಿಕೊಂಡು, ನಿರ್ಗತಿಕರಾಗಿ ಬೀದಿಗೆ ಬೀಳುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಅವರ ಪ್ರಜ್ಞಾಹೀನ ವರ್ತನೆ ನಾಗರಿಕ ಸಮಾಜಕ್ಕೆ ಮುಜುಗರವನ್ನೂ ಉಂಟು ಮಾಡುತ್ತಿದೆ. ಇದೀಗ ಉಪ್ಪಿನಂಗಡಿಯಲ್ಲಿ ಅಲೆದಾಡುತ್ತಿರುವ ನಿರ್ಗತಿಕ ಕುಡುಕರಿಗೂ ಕುಟುಂಬಗಳಿದ್ದು, ಕುಟುಂಬ ಸದಸ್ಯರಿಗೆ ಹಿಂಸೆ ನೀಡಿ ಬೀದಿಗೆ ಬಿದ್ದಿದ್ದಾರೆ. ಈ ಕಾರಣಕ್ಕಾಗಿ ನಿರ್ಗತಿಕ ಕುಡುಕರಿಗೆ ಅಗತ್ಯ ಚಿಕಿತ್ಸೆ ಒದಗಿಸಿ ಪುನರ್ವಸತಿ ಕಲ್ಪಿಸುವ ಹೊಣೆಯನ್ನು ಸರ್ಕಾರ ವಹಿಸಬೇಕು. ಹಾದಿಬೀದಿಗಳಲ್ಲಿ ಅಲೆದಾಡುವ ಕುಡುಕರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಅಲ್ಲಿ ಅವರಿಗೆ ಯೋಗ್ಯ ಚಿಕಿತ್ಸೆ ನೀಡಿ ಉತ್ತಮ ಬದುಕು ಅನುಭವಿಸುವಂತೆ ಮಾಡಬೇಕು. -ಕಿಶೋರ್ ನೀರಕಟ್ಟೆ , ಖಾಸಗಿಆಂಬುಲೆನ್ಸ್ ಚಾಲಕ https://www.vijayavani.net/bsnel-4g-tower