ಜಾಗೃತ ಸಮಾಜದಿಂದ ವ್ಯಸನಮುಕ್ತ ದೇಶ ನಿರ್ಮಾಣ : ಡಾ.ಡಿ. ವೀರೇಂದ್ರ ಹೆಗ್ಗಡೆ ಆಶಯ

de-addiction camp
ಮದ್ಯವರ್ಜನ ಶಿಬಿರದಲ್ಲಿ ಡಾ.ಹೆಗ್ಗಡೆ ಮಾತನಾಡುತ್ತಿರುವುದು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮನಪರಿವರ್ತನೆ, ಭಗವಂತನ ಧ್ಯಾನ, ಮನಸ್ಸಿನ ಸಂಕಲ್ಪದಿಂದ ವ್ಯಸನಮುಕ್ತರಾಗಲು ಸಾಧ್ಯ. ನಮ್ಮ ಮೇಲಿನ ನಿಯಂತ್ರಣವನ್ನು ನಾವೇ ಸಾಧಿಸಬೇಕು. ಯಾವುದೇ ವ್ಯಸನದಿಂದ ಸಾಧಿಸುತ್ತೇನೆಂಬ ಭ್ರಮೆಯಿಂದ ಹೊರಗೆ ಬಂದು ಸದೃಢ ಮನಸ್ಸಿನಿಂದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ವ್ಯಸನಗಳು ನಿಧಾನವಾಗಿ ಕೊಲ್ಲುವ ವಿಷ. ಕ್ಷಣಿಕ ಸುಖವನ್ನು ನೀಡುವ ಈ ಚಟಗಳು ನಮ್ಮ ಜೀವನವನ್ನೇ ವಿನಾಶಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಉಜಿರೆ ಲಾಯಿಲ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 222ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವ್ಯಸನಗಳ ಬಳಕೆಯ ಪ್ರಮಾಣ ಜಾಸ್ತಿಯಾಗುತ್ತಿದ್ದು, ಮಾದಕ ವಸ್ತುಗಳ ದಂಧೆಯ ಪ್ರಕರಣಗಳೂ ಹೆಚ್ಚಾಗುತ್ತಿವೆ. ಕುತೂಹಲ, ಆಕರ್ಷಣೆ, ತಪ್ಪು ನಿರ್ಧಾರಗಳಿಂದ ವ್ಯಸನಕ್ಕೆ ಬಲಿ ಬೀಳುವವರೇ ಜಾಸ್ತಿ. ಈ ನಿಟ್ಟಿನಲ್ಲಿ ಡ್ರಗ್ಸ್ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಜನಜಾಗೃತಿ ವೇದಿಕೆ, ಶಿಬಿರಗಳು ಮಹತ್ತರ ಪಾತ್ರವನ್ನು ವಹಿಸುತ್ತಿದ್ದು, ಇಂದು ಸಾವಿರಾರು ಜನರ ಪರಿವರ್ತನೆಗೆ ಮತ್ತು ಜಾಗೃತಿಗೆ ಸಾಕ್ಷಿಯಾಗಿದೆ. ಜಾಗೃತ ಸಮಾಜದಿಂದ ವ್ಯಸನಮುಕ್ತದೇಶ ನಿರ್ಮಾಣ ಸಾಧ್ಯ ಎಂದರು.

ಈ ವಿಶೇಷ 8ದಿನದ ಶಿಬಿರದಲ್ಲಿ ರಾಜ್ಯಾದ್ಯಂತದ 74 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮನೋವೈದ್ಯಕೀಯ ಚಿಕಿತ್ಸೆ, ಯೋಗ ಕಾರ್ಯಕ್ರಮ, ಸಲಹಾ ಕಾರ್ಯಕ್ರಮಗಳನ್ನು ಪ್ರಮುಖವಾಗಿ ನಡೆಸಿ ಮನಪರಿವರ್ತನೆಗೆ ಆದ್ಯತೆ ನೀಡಲಾಗಿದೆ.

ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿಗಳಾದ ದಿನೇಶ್ ಮರಾಠಿ, ಚಿತ್ತರಂಜನ್, ಆರೋಗ್ಯ ಸಹಾಯಕ ಜಯಲಕ್ಷ್ಮೀ, ಶ್ವೇತಾ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಜುಲೈ 6ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net