

ಬಂಟ್ವಾಳ: ಪ್ರಕೃತಿಯ ವಿಚಾರಗಳಿಂದ ನಾವು ವಿಸ್ಮಿತರಾಗುತ್ತೇವೆ. ವಿಸ್ಮಯಗಳು ಪ್ರಚೋದಿಸಿ ಹೃದಯದ ಭಾಷೆಯಾಗಿ ಕವನ ರೂಪದಲ್ಲಿ ಹೊರಹೊಮ್ಮುತ್ತದೆ. ಕವನ ಬುದ್ಧಿಯ ಭಾಷೆ ಅಲ್ಲ. ಅದು ಹೃದಯದ ಭಾಷೆ ಎಂದು ಸಾಹಿತಿ ಪ್ರೊ.ರಾಜಮಣಿ ರಾಮಕುಂಜ ಹೇಳಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಸಹಯೋಗದಲ್ಲಿ ಏರ್ಪಡಿಸಲಾದ, ಜಿಲ್ಲಾಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪರಿಸರ ಸಂಬಂಧಿತ ಸ್ವರಚಿತ ಕವಿತೆ ವಾಚನ ಮಾಡಿದರು. ವೈಷ್ಣವಿ ಕಲ್ಲಡ್ಕ ನಿರೂಪಿಸಿದರು.
ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ಜರುಗಿತು. ಕವಯಿತ್ರಿ ಅಪೂರ್ವ ಕಾರಂತ್ ಪುತ್ತೂರು ನಿರೂಪಿಸಿದರು. ಕವಿಗಳಾದ ಡಾ.ಸುರೇಶ ನೆಗಳಗುಳಿ, ರೈಮಂಡ್ ಡಿಕುನ್ಹಾ ತಾಕೊಡೆ, ಪಂಕಜಾ ಮುಡಿಪು, ಶಾಂತಾ ಪುತ್ತೂರು, ಜಯಶ್ರೀ ಶೆಣೈ ಬಂಟ್ವಾಳ, ಸೋನಿತಾ ನೇರಳಕಟ್ಟೆ, ಜಯರಾಮ ಪಡ್ರೆ, ಹೇಮಾವತಿ ಸಾಲೆತ್ತೂರು, ಋತ್ವಿಕ್ ಮೊಳೆಯಾರ, ವಿಶ್ವನಾಥ ಮಿತ್ತೂರು ಸ್ವರಚಿತ ಪರಿಸರ ಸಂಬಂಧಿತ ಕವನ ವಾಚಿಸಿದರು.
ಪ್ರೌಢಶಾಲಾ ವಿದ್ಯಾರ್ಥಿಗಳ ಕವಿಗೋಷ್ಠಿ ಕವಯಿತ್ರಿ ಶಿಕ್ಷಕಿ ಸೀತಾಲಕ್ಷ್ಮೀ ವರ್ಮ ವಿಟ್ಲ ಅಧ್ಯಕ್ಷತೆಯಲ್ಲಿ ಜರುಗಿತು. ವೈಷ್ಣವಿ ಕಡ್ಯ ನಿರೂಪಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಸಿದ್ಧ ಕವಿಗಳ ಪರಿಸರ ಗೀತೆ ಹಾಡಿದರು. ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್, ಮುಖ್ಯ ಶಿಕ್ಷಕ ಗೋಪಾಲ, ಹಿರಿಯ ಸಾಹಿತಿ ಗಣರಾಜ ಕುಂಬ್ಳೆ, ಉದ್ಯಮಿ ನಾಗೇಶ ಕಲ್ಲಡ್ಕ ಉಪಸ್ಥಿತರಿದ್ದರು. ಕವಯಿತ್ರಿ ಮಧುರ ಕಡ್ಯ ವಂದಿಸಿದರು.