ಯೂನಿಯನ್ ಲೀಡರ್​ಗಳ ಮೇಲೆ ನಂಬಿಕೆ ಇಡಿ, ಮುಷ್ಕರದಿಂದ ಹಿಂದೆ ಸರಿಯಿರಿ: ಡಿಸಿಎಂ ಸವದಿ

Lakshman Savadi 23 June 20
Published on

ಬೆಂಗಳೂರೂ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸುತ್ತಿರುವ ಮುಷ್ಕರವನ್ನು ಸದ್ಯ ಕೈಬಿಡಿ. ನಿಮ್ಮ ಯೂನಿಯನ್​ ಲೀಡರ್​ಗಳ ಮೇಲೆ ನಂಬಿಕೆ ಇಟ್ಟು, ಮುಷ್ಕರದಿಂದ ಹಿಂದೆ ಸರಿಯಬೇಕು ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಶುಕ್ರವಾರ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರ ಮುಷ್ಕರ ತೀವ್ರಗೊಂಡ ಕೂಡಲೇ ಯೂನಿಯನ್ ಲೀಡರ್​ಗಳನ್ನು ತಮ್ಮ ನಿವಾಸಕ್ಕೇ ಕರೆಯಿಸಿಕೊಂಡ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅಹವಾಲುಗಳನ್ನು ಆಲಸಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಾರಿಗೆ ನೌಕರರು ಮುಷ್ಕರ ಬಿಟ್ಟು ಕೆಲಸ ಆರಂಭಿಸಬೇಕು. ಎಲ್ಲೆಲ್ಲಿ ಬಸ್ ಸಂಚಾರ ಇದೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಯೂನಿಯನ್ ಲೀಡರ್​ಗಳ ಜತೆಗೆ ಇನ್ನೂ ಒಂದು ಸುತ್ತಿನ ಸಭೆ ನಡೆಸುತ್ತೇವೆ.

ಸಾರಿಗೆ ಇಲಾಖೆ ನೌಕರರು ಅವರ ನಾಯಕರಲ್ಲಿ ನಂಬಿಕೆ ಇರಿಸಿಕೊಳ್ಳಬೇಕು. ಅವರ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ನಿಮ್ಮ ಹಿತವನ್ನು ಕಾಯುತ್ತೇವೆ. ಕರೊನಾ ಇದ್ದಾಗಲೂ ಎಲ್ಲರಿಗೂ ವೇತನ ಕೊಟ್ಟಿದ್ದೇವೆ. ವೇತನ ತಡೆ ಹಿಡಿದಿಲ್ಲ. ಜನರಿಗೆ ತೊಂದರೆ ಕೊಡಬೇಡಿ. ಲೀಡರ್​ಗಳ ಮಾತಿಗೆ ಬೆಲೆ ಕೊಟ್ಟು ಮುಷ್ಕರ ಹಿಂಪಡೆಯಬೇಕು. ಸದ್ಯಕ್ಕೆ ಎಸ್ಮಾ ಜಾರಿಗೊಳಿಸುವುದಿಲ್ಲ. ನೌಕರರ ಮೇಲೆ ನಂಬಿಕೆ, ಭರವಸೆ ಇದೆ. ಮುಷ್ಕರ ಕೈಬಿಟ್ಟು ಕೆಲಸ ಶುರುಮಾಡಿ ಎಂದು ಸಚಿವರು ಮನವಿ ಮಾಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net