

ಮೈಸೂರು: ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರಿಸಿದ ವಿಚಾರದಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಬೆಳಗಾವಿಯಲ್ಲಿ ಬೇರೊಂದು ಕಾರ್ಯಕ್ರಮ ಮಾಡಲು ಉದ್ದೇಶಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಈ ಕುರಿತು ಮಾತನಾಡಿದ ಡಿಸಿಎಂ ಆಗಸ್ಟ್ 30ರಂದು ಒಂದು ಬಟನ್ ಒತ್ತಿದ ಕೂಡಲೇ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಹಣ ಸಂದಾಯವಾಗುತ್ತದೆ ಎಂದು ಹೇಳಿದ್ದಾರೆ.
ಎಲ್ಲರ ಒಮ್ಮತದ ತೀರ್ಮಾನದಂತೆ ಮೈಸೂರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ತೊಂದರೆಯಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾವು ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲಿಗೆ ಮೈಸೂರಿನಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಿದ್ದೆವು. ಆದರೆ, ಅಕ್ಕಿ ಕೊಡುವ ವಿಚಾರದಲ್ಲಿ ಸ್ವಲ್ಪ ಅಡೆ ತಡೆಗಳಿದ್ದ ಕಾರಣ ಗೃಹಲಕ್ಷ್ಮಿ ಯೋಜನೆಯನ್ನು ಇಲ್ಲಿಂದ ಆರಂಭಿಸುತ್ತಿದ್ದೇವೆ. ಆಗಸ್ಟ್ 30ರಂದು ಒಂದು ಬಟನ್ ಒತ್ತಿದ ಕೂಡಲೇ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಹಣ ಸಂದಾಯವಾಗುತ್ತದೆ.
ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಮೆಸ್ಸೇಜ್ ಬರುತ್ತದೆ. ಯೋಜನೆ ಸಂಬಂಧ ಈಗಾಗಲೇ ಬ್ಯಾಂಕ್ಗಳಲ್ಲಿ ಹಣ ಠೇವಣಿ ಇಡಲಾಗಿದ್ದು, ಸರ್ವರ್ ಸಮಸ್ಯೆಯಿಂದಾಗಿ ನಿಮ್ಮ ಖಾತೆಗಳಿಗೆ ದುಡ್ಡು ಬರುವುದು ತಡವಾಗಬಹುದಷ್ಟೇ ಎಂದು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ಕೆಲವರು ನಮ್ಮನ್ನು ಸಂಪರ್ಕಿಸಿ ಪಕ್ಷಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ನಾವು ಬರುವವರಿಗೆ ಸ್ವಾಗತ ಕೋರುತ್ತಿದ್ದೇವೆ. ನಾವಾಗಿಯೇ ಯಾರನ್ನೂ ಕರೆತರಲು ಪ್ರಯತ್ನಿಸಿಲ್ಲ. ಪಕ್ಷದ ಭವಿಷ್ಯ ಹಾಗೂ ವರ್ಚಸ್ಸನ್ನು ಗಮನದಲ್ಲಿಟ್ಟುಕೊಂಡು ಅವರೇ ಬರುತ್ತಿದ್ದಾರೆ.
ಎಷ್ಟು ಜನ ಬರುತ್ತಾರೆ ಎಂಬುದನ್ನು ಈಗಲೇ ನಾನು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾಲ, ಸಮಯ ಘಳಿಗೆ ಎಂಬುದು ಇರುತ್ತದೆ. ಆ ಘಳಿಗೆ ಬಂದಾಗ ಎಲ್ಲವೂ ನಡೆಯುತ್ತದೆ. ಇಂತಹ ಮಾತುಗಳನ್ನು ನಾನು ಹೇಳುತ್ತಾ ಹೋದರೆ ಅದು ಬಹಳ ದೊಡ್ಡದಾಗುತ್ತದೆ. ಈಗ ಅದರ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಚುನಾವಣೆ ಪ್ರಚಾರದಲ್ಲಿ ಹೇಳಿದ್ದರು. ಆದರೆ, ನಮ್ಮ ಗ್ಯಾರಂಟಿ ಯೋಜನೆಗಳು ದೇಶಾದ್ಯಂತ ಸದ್ದು ಮಾಡುತ್ತಿದ್ದು, ಮಧ್ಯಪ್ರದೇಶ ಸರ್ಕಾರ ನಮ್ಮ ಮಾದರಿಯಲ್ಲಿಯೇ ಗ್ಯಾರಂಟಿ ಯೋಜನೆಯನ್ನು ಜಾರತಿ ಮಾಡಿದೆ. ಪ್ರಧಾನಿ ಮೋದಿಯವರು ಇದಕ್ಕೇನು ಹೇಳುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.