

ನೊಣವಿನಕೆರೆ: ಉಪಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಿದ್ದ ಡಿ.ಕೆ.ಶಿವಕುಮಾರ್ ಭಾನುವಾರ ಮಧ್ಯಾಹ್ನ ತಿಪಟೂರು ತಾಲೂಕು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದರು.
ಶ್ರೀಮಠದ ಗುರು ಭವನಕ್ಕೆ ಭೇಟಿನೀಡಿ ಪೀಠಾಧ್ಯಕ್ಷ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರಸ್ವಾಮೀಜಿ ಆರ್ಶೀವಾದ ಪಡೆದರು. ಶ್ರೀಮಠದ ಹಿಂಭಾಗದಲ್ಲಿರುವ ಗವಿಹತ್ತಿರ ತೆರಳಿ ಪೂಜೆ ಸಲ್ಲಿಸಿದರು.
ಮೂಲ ಕತೃ ಕಾಡಸಿದ್ದೇಶ್ವರರ ಗದ್ದುಗೆಗೆ ಆರ್ಚನೆ, ಸಂಕಲ್ಪ, ಒಂದು ಗಂಟೆಗೂ ಹೆಚ್ಚುಕಾಲ ವಿವಿಧ ಧಾರ್ಮಿಕ ಆಚರಣೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ನೊಣವಿನಕೆರೆ ಮಠಕ್ಕೆ ನನ್ನ ಭೇಟಿ ವಿಶೇಷ ಏನಿಲ್ಲ. 2004ರಿಂದಲೂ ಶ್ರೀಮಠಕ್ಕೆ ಬರುತ್ತಿದ್ದು ಒಳ್ಳೆಯದ್ದು ಮತ್ತು ಕೆಟ್ಟದ್ದು, ಶ್ರಮ, ನ್ಯಾಯ, ನೀತಿ ಎಲ್ಲದಕ್ಕೂ ಬರುವುದು ನನ್ನ ಪದ್ಧತಿ ಹಾಗು ಮನಸ್ಸಿನ ಶಾಂತಿಗೆ, ನಂಬಿಕೆಗೆ, ಮಾರ್ಗದರ್ಶನಕ್ಕೆ ಕ್ಷೇತ್ರಕ್ಕೆ ಬರುತ್ತೇನೆ ಎಂದರು.
2004ರಿಂದಲೂ ಇಂದಿನವರೆಗೆ ಗಂಗಾಧರ ಅಜ್ಜಯ್ಯ ಮತ್ತು ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅವರ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸದಿಂದ ಶ್ರೀಮಠದ ಭಕ್ತನಾಗಿ ಸೇವೆಸಲ್ಲಿಸುತ್ತಿದ್ದೇನೆ ಎಂದರು.
ಡಿಕೆಶಿ ಶ್ರೀಮಠದ ಆನೆಗೆ ಕಾಣಿಕೆ ಹಾಗೂ ಹಣ್ಣುಗಳನ್ನು ನೀಡಿ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು. ಶ್ರೀಮಠದಲ್ಲಿಯೇ ಪ್ರಸಾದ ಸ್ವೀಕರಿಸಿ ಆದಿಚುಂಚನಗಿರಿ ಮಠಕ್ಕೆ ತೆರಳಿದರು.
ಕಾಡಸಿದ್ದೇಶ್ವರ ಮಠದ ಡಾ.ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರಸ್ವಾಮೀಜಿ, ಕಿರಿಯ ಶ್ರೀಗಳಾದ ಅಭಿನವ ಶ್ರೀಕಾಡಸಿದ್ದೇಶ್ವರ ಸ್ವಾಮೀಜಿ, ಶಾಸಕರಾದ ಕೆ.ಷಡಕ್ಷರಿ, ಚೆಲುವರಾಯಸ್ವಾಮಿ ಇದ್ದರು.