ಬಾಯಿ ಚಪಲಕ್ಕೆ ನನ್ನ ಹೆಸರು ದುರುಪಯೋಗ.. ಕಾಂಗ್ರೆಸ್​ಗೆ ಬರುವಂತೆ ಶ್ರೀರಾಮುಲುಗೆ ಆಹ್ವಾನಿಸಿಲ್ಲ; ಡಿಸಿಎಂ ಡಿಕೆ ಶಿವಕುಮಾರ್​​ | DK Shivakumar

Untitled design (5)
Published on

ಬೆಂಗಳೂರು: ನನಗೆ ಶ್ರೀರಾಮುಲು ಅವರು ಸಿಕ್ಕಿಯೂ ಇಲ್ಲ ಮಾತನಾಡಿಯೂ ಇಲ್ಲ. ಪಕ್ಷಕ್ಕೆ ಬರುವಂತೆ ಅವರಿಗೆ ಯಾವುದೇ ಆಹ್ವಾನ ನೀಡಿಲ್ಲ. ಈ ವಿಚಾರದಲ್ಲಿ ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್(DK Shivakumar) ವಾಗ್ದಾಳಿ ನಡೆಸಿದರು.

ಶ್ರೀರಾಮುಲು ಅವರನ್ನು ನೀವು ಸಂರ್ಪಕ ಮಾಡಿದ್ದೀರಿ ಎಂದು ಜನಾರ್ಧನ ರೆಡ್ಡಿ ಅವರು ಮಾಡಿರುವ ಆರೋಪದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್​​ ಅವರನ್ನು ಕೇಳಿದಾಗ, ಆತ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾನೆ. ಆತ ಆ ಪಕ್ಷದಲ್ಲಿಯೇ ಇರಲಿಲ್ಲ. ಈಗ ಆ ಪಕ್ಷಕ್ಕೆ ಕಾಲಿಟ್ಟ, ಆ ಮನೆಯನ್ನೇ ಒಡೆಯುವ ಪ್ರಯತ್ನ ಮಾಡುತ್ತಿದ್ದಾನೆ. ನಾನು ಆತನ ಹೆಸರು ಹೇಳಿ ಅವನನ್ನು ಏಕೆ ದೊಡ್ಡ ಮನುಷ್ಯನನ್ನಾಗಿ ಮಾಡಲಿ? ಆತ ನನ್ನ ಹೆಸರು ತೆಗೆದುಕೊಂಡರೆ ದೊಡ್ಡವನಾಗುತ್ತಾನೆಯೇ? ನಾನು ಸಂಪರ್ಕದಲ್ಲಿ ಇರುವುದನ್ನು ಆತ ನೋಡಿದ್ದಾನೆಯೇ? ಆತ ಯಾರ ಜತೆ ಸಂಪರ್ಕದಲ್ಲಿ ಇದ್ದ ಎಂಬುದನ್ನು ಈಗ ಚರ್ಚೆ ಮಾಡುವುದು ಬೇಡ. ನಾನು ಯಾವುದನ್ನು ಬಹಿರಂಗಗೊಳಿಸಲು ಹೋಗುವುದಿಲ್ಲ ಎಂದು ಹೇಳಿದರು.

ಆದರೆ ಈ ಹಿಂದೆ-ಚುನಾವಣೆಗೆ ಮುಂಚಿತವಾಗಿ ಶ್ರೀರಾಮಲು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ನಿಜ. ಆಗ ಅವರು ಬರುವುದಿಲ್ಲ ಬಿಜೆಪಿಯಲ್ಲಿಯೇ ಉಳಿದುಕೊಳ್ಳುತ್ತೇನೆ ಎಂದು ಹೇಳಿದ್ದರು. ನಾನು ಆ ರೀತಿ ಸುಮಾರು 50 ಜನಕ್ಕೆ ಕೇಳಿದ್ದೇನೆ ಎಂದು ತಿಳಿಸಿದರು. ಒಂದು ವೇಳೆ ಶ್ರೀರಾಮುಲು ಅವರು ಈಗ ಕಾಂಗ್ರೆಸ್​ಗೆ ಬರಲು ಒಪ್ಪಿದರೆ ಎಂದು ಕೇಳಿದಾಗ, ಇದರ ಬಗ್ಗೆ ನಾನೇಕೆ ಸುಮ್ಮನೆ ಯೋಚನೆ ಮಾಡಲಿ, ನನ್ನ ಮುಂದೆ ಈ ವಿಚಾರ ಪ್ರಸ್ತಾಪವಾಗಲಿ ಆಗ ಚರ್ಚೆ ಮಾಡೋಣ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net