

ಬೆಂಗಳೂರು: ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ ಅವರ ಹೋರಾಟಕ್ಕೆ ಮತ್ತೊಮ್ಮೆ ಶಕ್ತಿ ತುಂಬಲು ನಾವೆಲ್ಲ ಹೊರಟಿದ್ದೇವೆ. ನಮ್ಮ ಹೋರಾಟಗಳಿಗೆ ರಾಯಣ್ಣನೇ ಸ್ಪೂರ್ತಿ. ಈ ದೇಶದಲ್ಲಿ ಪ್ರಜಾಪ್ರಭುತ್ವ ಸುಮ್ಮನೆ ಬಂದಿಲ್ಲ. ರಾಯಣ್ಣನಂತವರ ತ್ಯಾಗ, ಬಲಿದಾನದಿಂದ ದೊರಕಿದೆ. ಇದನ್ನು ಕಾಪಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಷ್ಠಾನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆದ 226ನೇ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಜಯಂತೋತ್ಸವದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕಳೆದ ವರ್ಷ ಇದೇ ರೈಲು ನಿಲ್ದಾಣದ ಬಳಿ ಇರುವ ರಾಯಣ್ಣ ಪ್ರತಿಮೆ ಬಳಿಯಿಂದಲೇ ಸುಮಾರು 3 ಲಕ್ಷ ಜನ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡಿದ್ದೆವು. ರಾಜ್ಯದ ಇತಿಹಾಸದಲ್ಲಿ ಇದೊಂದು ಅಚ್ಚಳಿಯದ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮ ರಾಜ್ಯದಲ್ಲಿ ಹೊಸ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯಿತು ಎಂದರು.
ಈ ದೇಶದಿಂದ ಕೋಮುವಾದಿಗಳನ್ನು ಹೊಡೆದೊಡಿಸುವ ಕಾಲ ಹತ್ತಿರ ಬಂದಿದೆ. ಈ ಬದಲಾವಣೆ ಕರ್ನಾಟಕದಿಂದಲೇ ಆರಂಭಗೊಂಡಿದೆ, ಮತ್ತೊಮ್ಮೆ ಈ ದೇಶದಲ್ಲಿ ಗಾಂಧಿ ಅವರ ಆಶಯಗಳನ್ನು ಬಿತ್ತೋಣ, ಯುವಕರು ರಾಯಣ್ಣನಂತೆ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.