ಕನಕಪುರ ನ್ಯಾಯಾಲಯದಲ್ಲಿ ಡಿಸಿಎಂ ಹಾಜರ್

FotoJet
Published on

ಬಸನಗೌಡ ಪಾಟೀಲ್ ಯತ್ನಾಳ್ ಅಕ್ರಮ ಆಸ್ತಿ ಪ್ರಕರಣದ ಹಿನ್ನೆಲೆ ವಿಚಾರಣೆ

ಕನಕಪುರ: ಕಳೆದ ವರ್ಷ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಕ್ರಮ ಆಸ್ತಿ ಪ್ರಕರಣದ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಅವರ ಮುಂದೆ ಹಾಜರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ನೀಡಿದರು. ವಕೀಲ ಗಣಪತಿ ಹೆಗ್ಡೆ ಹಾಜರಾಗಿದ್ದರು, ನ್ಯಾಯಾಲಯ ಪ್ರಕರಣವನ್ನು ಜೂನ್ 19ಕ್ಕೆ ಮುಂದೂಡಿತು.

ಡಿ.ಕೆ.ಶಿವಕುಮಾರ್ ಪತ್ರಕರ್ತರೊಂದಿಗೆ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಅವರದು ಹರಕು ಬಾಯಿ ಇದ್ದಂತೆ ಮನ ಬಂದಂತೆ ಮಾತನಾಡುವ ಅವರು, ಆದಾಯ ತೆರಿಗೆ ಪ್ರಕರಣದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಆದ್ದರಿಂದ ಅವರ ವಿರುದ್ಧ 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದರು.

ಈ ನಡುವೆ ಯತ್ನಾಳ್, ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣವನ್ನು ಬೆಂಗಳೂರು ನ್ಯಾಯಾಲಯದಲ್ಲಿ ಮುಂದುವರಿಸಲು ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿ, ಕನಕಪುರಕ್ಕೆ ಹೋಗಿ ಎಂದು ಆದೇಶ ನೀಡಿದೆ. ಆ ಹಿನ್ನೆಲೆಯಲ್ಲಿ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ತೋರಿಸಿದ್ದೇನೆ ಎಂದರು.

ಪ್ರಾಣ ಹೋದರು ಬಿಜೆಪಿಗೆ ಹೋಗಲ್ಲ

ಈ ಮಧ್ಯೆ ನಾನು ಬಿಜೆಪಿ ಸೇರುತ್ತೇನೆ ಎಂಬ ಊಹಾಪೋಹ ಹಬ್ಬಿಸಲಾಗಿತ್ತು. ಕಾರ್ಯಕರ್ತರಲ್ಲೂ ಗೊಂದಲ ಉಂಟಾಗಿತ್ತು. ಬಿಜೆಪಿ ಸೇರುವ ರಕ್ತ ನಮ್ಮದಲ್ಲ, ನಾವು ಯಾರಿಗೂ ಶರಣಾಗುವ ಸಂದರ್ಭವಿಲ್ಲ, ಈಗಾಗಲೇ ನಾನು ಎಲ್ಲ ಕಷ್ಟ ಸುಖಗಳನ್ನು ಅನುಭವಿಸಿ ಬಂದಿದ್ದೇನೆ. ನನಗೆ ಕನಕಪುರದ ಜನ ಮತ ನೀಡಿ ಡಿಸಿಎಂವರೆಗೂ ಬೆಳೆಸಿದ್ದಾರೆ. ಪ್ರಾಣ ಹೋದರೂ ಬಿಜೆಪಿ ಸೇರುವ ಜಾಯಮಾನ ನಮ್ಮದಲ್ಲ ಎಂದು ಡಿಕೆಶಿ ಹೇಳಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net