

ಕನಕಪುರ: ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿ ಭರವಸೆಯಂತೆ ಸಮರ್ಪಕವಾಗಿ ಜಾರಿಗೊಳಿಸುವ ಮೂಲಕ ಎಲ್ಲರ ಮನ ಗೆದ್ದಿದ್ದೇವೆ. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಎಷ್ಟೇ ಟೀಕೆ ಮಾಡುತ್ತಿದ್ದರೂ ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಅಂತೆಯೇ,ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಮೂರು ತಿಂಗಳ ಹಣ ಶೀಘ್ರವೇ ಅರ್ಹರಿಗೆ ತಲುಪಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಭರವಸೆ ನೀಡಿದರು.
ತಾಲೂಕಿನ ಭೂಹಳ್ಳಿ ಗ್ರಾಮದ ಸಮೀಪ ಜಲಸಂಪನ್ಮೂಲ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದಿಂದ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ತಾಲೂಕು ಸಮಗ್ರ ಅಭಿವೃದ್ಧಿಗೆ 400 ಕೋಟಿ ರೂ. ಅನುದಾನ ತಂದಿದ್ದು, ಹಂತ-ಹಂತವಾಗಿ ಅಭಿವೃದ್ಧಿಗೊಳಿಸಲಾಗುವುದು. 250 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಕಾಮಗಾರಿ ಸೇರಿ ರಸ್ತೆ, ಭೂಹಳ್ಳಿ ಅರಣ್ಯ ಪ್ರದೇಶದ ಗಡಿಯಿಂದ 13 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ದೊಡ್ಡಆಲಹಳ್ಳಿಯಿಂದ ಕಬ್ಬಾಳುವರೆಗೆ 40 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ನಲ್ಲಹಳ್ಳಿ-ಮಲ್ಲಹಳ್ಳಿ ಸಂಪರ್ಕ ಸೇತುವೆಗೆ 11 ಕೋಟಿ ರೂ., ಹಾರೋಬೆಲೆ ಅರ್ಕಾವತಿ ನೀರನ್ನು ಬಳಸಿ ಸುತ್ತಮುತ್ತಲ ಗ್ರಾಮಗಳಿಗೆ ಸೂಕ್ಷ್ಮ ನೀರಾವರಿ ಕಲ್ಪಿಸಲು 70 ಕೋಟಿ ರೂ. ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ 2 ಸಾವಿರ ಎಕರೆಗೆ ನೀರು ಉಣಿಸಬಹುದಾಗಿದ್ದು, ಕೊಕ್ಕರೆಹೊಸಹಳ್ಳಿ ಬಳಿ ಸಂಪರ್ಕ ಸೇತುವೆಗೆ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಧೂಂತುರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸುಸಜ್ಜಿತ ಬಸ್ ತಂಗುದಾಣ ಉದ್ಘಾಟಿಸಲಿದ್ದು, ಸಾತನೂರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ನಡೆಯಲಿದೆ ಎಂದು ತಿಳಿಸಿದರು.
ಮಾಜಿ ಸಂಸದ ಡಿಕೆ ಸುರೇಶ್, ಗ್ಯಾರಂಟಿ ಅನುಷ್ಠಾನಗಳ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ಕೆ.ಎನ್.ದಿಲೀಪ್, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಪ್ರಾಧಿಕಾರದ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಆರ್.ಇ.ಎಸ್ ಅಧ್ಯಕ್ಷ ಶ್ರೀಕಂಠು, ಜಿಲ್ಲಾಧಿಕಾರಿ ಯಶ್ವಂತ್ ಗುರಕಾರ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಕಾವೇರಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಇತರರು ಇದ್ದರು.
ಕಾಡಾನೆ ಹಾವಳಿಗೆ ತಡೆ: ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸಲು ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಸಚಿವ ಈಶ್ವರ್ ಕಂದ್ರೆ 33 ಕೋಟಿ ರೂ. ಮಂಜೂರು ಮಾಡಿದ್ದಾರೆ. ಕಾಡಾನೆ ಹಾವಳಿ ತಡೆಯಲು ರೈಲ್ವೆ ಬ್ಯಾರಿಕೇಡ್ ಕಾಮಗಾರಿ ವೀಕ್ಷಣೆ ಮಾಡಿದ್ದೇನೆ ಎಂದು ಡಿಸಿಎಂ ಹೇಳಿದರು.
ಮೇಕೆದಾಟು ಕೇಂದ್ರ ಅನುಮತಿ ಕೊಡಲಿ : ತಾಲೂಕಿನಲ್ಲಿ ರೈತರ ಮಹತ್ವಕಾಂಕ್ಷಿ ಯೋಜನೆಯಾದ ಮೇಕೆದಾಟು ಆಣೆಕಟ್ಟು ನಿರ್ಮಾಣವಾಗಲೇಬೇಕು. ಇದಕ್ಕೆ ಸರ್ಕಾರ ಸನ್ನದ್ಧವಾಗಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿಬೇಕಿದೆ. ಎಚ್.ಡಿ.ಕುಮಾರಸ್ವಾಮಿ ಅನುಮತಿ ಕೊಡಿಸುತ್ತೇವೆ ಎಂದು ಹೇಳುತ್ತಾರೆ, ಆದರೆ ಇದುವರೆಗೂ ಅನುಮತಿಯೇ ಸಿಕ್ಕಿಲ್ಲ ಎಂದು ಡಿಸಿಎಂ ಹೇಳಿದರು.