

ಬೆಂಗಳೂರು: ಇತರೆ ಸರ್ಕಾರಿ ನೌಕರರಂತೆ ತಮಗೂ ಪಿಂಚಣಿ ಸೌಲಭ್ಯ ನೀಡುವಂತೆ ಕರ್ನಾಟಕ ರಾಜ್ಯ ಡಿಸಿಸಿ ಬ್ಯಾಂಕುಗಳ ನಿವೃತ್ತ ನೌಕರರ ಒಕ್ಕೂಟ ಆಗ್ರಹಿಸಿದೆ.
ಬುಧವಾರ ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಡಿಸಿಸಿ ಬ್ಯಾಂಕ್ ನಿವೃತ್ತ ನೌಕರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಒಕ್ಕೂಟದ ಅಧ್ಯಕ್ಷ ಕಾಳೇಗೌಡರು ಮಾತನಾಡಿ, 60 ವರ್ಷದ ನಂತರ ಪ್ರತಿಯೊಬ್ಬರಿಗೂ ನಿವೃತ್ತಿ ವೇತನ ನೀಡುವುದು ಸರ್ಕಾರದ ಕರ್ತವ್ಯ. ಸೇವೆಯಲ್ಲಿದ್ದಾಗ ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮಿಸಿರುತ್ತೇವೆ. 60ರ ನಂತರ ಬಹುಪಾಲು ಜನರಿಗೆ ಬಿಪಿ, ಶುಗರ್ ಮತ್ತಿತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಗೌರವದಿಂದ ಜೀವನ ನಡೆಸಲು, ಚಿಕಿತ್ಸೆ, ಔಷಧಿ ಖರೀದಿಸಲು ಕೂಡ ಎಷ್ಟೋ ಜನ ಕಷ್ಟಪಡುತ್ತಿದ್ದಾರೆ. ಅಂತಹವರ ಕಷ್ಟಕ್ಕೆ ನಾವು ಕೆಲಸ ಮಾಡಿದ ಸಂಸ್ಥೆ ನಮ್ಮ ಜೊತೆ ನಿಲ್ಲಬೇಕು. ನಾವು ಸರ್ಕಾರವನ್ನಾಗಲೀ, ಬ್ಯಾಂಕಿನಿಂದಾಗಲಿ ಒಂದು ರೂಪಾಯಿಯನ್ನು ಕೇಳುತ್ತಿಲ್ಲ. ಬ್ಯಾಂಕಿನ ವಾರ್ಷಿಕ ನಿವ್ವಳ ಲಾಭಾಂಶದ ಶೇ.25ನ್ನು ನಿಧಿಯ ರೂಪದಲ್ಲಿರಿಸಿ ಅದರ ಬಡ್ಡಿಯ ಹಣದಲ್ಲಿ ನಿವೃತ್ತ ನೌಕರರಿಗೆ ಪಿಂಚಣಿ ನೀಡಬೇಕು. ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳಲ್ಲಿ ಕೆಲವು ಬ್ಯಾಂಕ್‌ಗಳು ಈಗಾಗಲೇ ಈ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಬಗ್ಗೆ 1959-60ರ ಸಹಕಾರಿ ಕಾಯ್ದೆಗೆ ತಿದ್ದುಪಡಿ ತಂದು ಈ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ ಸಂಘಟನಾತ್ಮಕ ಹೋರಾಟದಿಂದ ಗೆಲುವು ದೊರೆತೇ ದೊರೆಯುತ್ತದೆ. ನಿವೃತ್ತ ನೌಕರರ ಬೇಡಿಕೆ ನ್ಯಾಯುತವಾಗಿದ್ದು, ನಿಮ್ಮ ಹೋರಾಟಕ್ಕೆ ಬೆಂಬಲವಾಗಿರುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಸಿಇಓ ಪುಂಡಲೀಕ ಸಾಧು, ಒಕ್ಕೂಟದ ಮಹಾದೇವಪ್ಪ, ಪುಟ್ಟರಾಜೇಗೌಡ, ನಾಗೇಂದ್ರಪ್ಪ, ಕೆಂಪೇಗೌಡ ಮತ್ತಿತರರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು.