

ಚನ್ನರಾಯಪಟ್ಟಣ: ಪುರಸಭೆಯಲ್ಲಿನ ವಿವಿಧ ವಾರ್ಡ್‌ಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಬುಧವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ನಗರೋತ್ಥಾನ ಯೋಜನೆಯಡಿ ಚನ್ನರಾಯಪಟ್ಟಣ ಪುರಸಭೆಗೆ 10 ಕೋಟಿ ರೂ. ಅನುದಾನದ ಪೈಕಿ ಮೊದಲ ಕಂತಾಗಿ 1.75ಕೋಟಿ ರೂ.ಬಿಡುಗಡೆಯಾಗಿ ಕಾಮಗಾರಿ ನಿರ್ವಹಿಸಲಾಗಿದೆ. ಸದ್ಯ ಈಗ ಮೊದಲ ಕಂತಿನಲ್ಲಿ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸುವ ಸಲುವಾಗಿ ಅವರು ಆಗಮಿಸಿ ಪಟ್ಟಣದ ಕುವೆಂಪುನಗರ, ಜನ್ನಕವಿ ರಸ್ತೆ, ಹಯಾತ್‌ನಗರ, ಶನಿದೇವರ ದೇವಸ್ಥಾನದ ರಸ್ತೆ, ಆದರ್ಶನಗರ, ಮಹಾಲಕ್ಷ್ಮೀ ಲೇಔಟ್, ಗೂರಮಾರನಹಳ್ಳಿ ಬಡಾವಣೆಗಳಲ್ಲಿ ನಿರ್ಮಾಣ ಮಾಡಿರುವ ರಸ್ತೆ, ಚರಂಡಿಗಳ ಪರಿಶೀಲನೆ ನಡೆಸಿದರು.
ತದನಂತರ ಅವರು ಪಟ್ಟಣದ ಗಣಪತಿ ಪೆಂಡಾಲಿಗೆ ಭೇಟಿ ನೀಡಿ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿ, ಅಲ್ಲಿನ ಚಂದ್ರಯಾನ-3 ಸೆಟ್ ವೈಭವವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಿ.ಸತ್ಯಭಾಮಾ, ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ನಿರ್ವಹಣೆ ಉತ್ತಮವಾಗಿದ್ದು, ಬಹುಮುಖ್ಯವಾಗಿ ಇಲ್ಲಿ ಫುಟ್‌ಪಾತ್ ಒತ್ತುವರಿ ಆಗಿದ್ದು, ಸಾರ್ವಜನಿಕರು, ವಾಹನಗಳ ಓಡಾಟಕ್ಕೆ ತೊಂದರೆಯಾಗಿರುವುದು ಕಂಡುಬಂದಿದೆ. ಅದನ್ನು ಶೀಘ್ರ ತೆರವುಗೊಳಿಸಬೇಕು, ಇನ್ನೊಂದು ತಿಂಗಳಲ್ಲಿ ಮತ್ತೊಮ್ಮೆ ಭೇಟಿ ನೀಡಲಿದ್ದು, ಅಷ್ಟರೊಳಗೆ ರಸ್ತೆಬದಿ ಒತ್ತುವರಿ ತೆರವಾಗಿರಬೇಕೆಂದು ಸೂಚಿಸಿದರು.
ತಹಸೀಲ್ದಾರ್ ಸಿ.ಜಿ.ಗೀತಾ, ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ಕುಮಾರ್ ಹಾಗೂ ಜಿಲ್ಲಾ ಕಚೇರಿ ಸಿಬ್ಬಂದಿ ಮತ್ತು ಪುರಸಭೆ ಸಿಬ್ಬಂದಿ, ಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎನ್.ಅಶೋಕ್, ಪದಾಧಿಕಾರಿಗಳಾದ ಮನೋಹರ್, ರವೀಂದ್ರ, ಸತ್ಯನಾರಾಯಣ, ಸಿ.ಕೆ.ಕೃಷ್ಣ ಮತ್ತಿತರರು ಹಾಜರಿದ್ದರು.