ಹಾಡ್ಲಹಳ್ಳಿ ಗ್ರಾಮಸ್ಥರ ಸಮಸ್ಯೆ ಆಲಿಸಿದ ಡಿಸಿ

10 ¸skp 1
Published on

 ಸಕಲೇಶಪುರ: ರಾತ್ರಿ ವೇಳೆ ಮನೆ ಮೇಲೆ ಕಲ್ಲು ಬೀಳುತ್ತವೆ, ಏಕಾಏಕಿ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಿಸಲಾಗಿದೆ, ಹೊಸದಾಗಿ ಮನೆಕಟ್ಟಲು ಅಡ್ಡಿಪಡಿಸಲಾಗುತ್ತಿದೆ. ನೆಮ್ಮದಿಯಿಂದ ಗ್ರಾಮದಲ್ಲಿ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಾಲೂಕಿನ ಹಾಡ್ಲಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಲತಾಕುಮಾರಿ ಎದುರು ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಜನಸಂಪರ್ಕ ಸಭೆಯಲ್ಲಿ ಊರಿನಲ್ಲಿ ಅನುಭವಿಸುತ್ತಿರುವ ಕಷ್ಟಗಳನ್ನು ಹಾಡ್ಲಹಳ್ಳಿ ಗ್ರಾಮಸ್ಥರು ವಿವರಿಸಿದ್ದರು. ಈ ವೇಳೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಅದರಂತೆ ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎದುರು ಗ್ರಾಮಸ್ಥರು ದೂರುಗಳ ಸುರಿಮಳೆಯನ್ನೇ ಸುರಿಸಿದರು.

ಗ್ರಾಮದ ಸುಮಾರು 25 ಎಕರೆ ಪ್ರದೇಶದಲ್ಲಿ ಹಿಂದಿನಿಂದಲೂ ಸುಮಾರು 160ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದೆ. ದೇವಸ್ಥಾನ, ಸ್ಮಶಾನ ಕೂಡ ಇದೆ. ಆದರೆ, ಕಾಲಕ್ರಮೇಣ ಗ್ರಾಮಸ್ಥರ ಗಮನಕ್ಕೆ ಬಾರದಂತೆ ವ್ಯಕ್ತಿಯೊಬ್ಬರಿಗೆ ನಾವು ವಾಸ ಮಾಡುವ ಪ್ರದೇಶವೇ ಮಂಜೂರಾಗಿದೆ. ಮಂಜೂರಾದ ವ್ಯಕ್ತಿ ಇದುವರೆಗೆ ಗ್ರಾಮಸ್ಥರಿಗೆ ಯಾವುದೇ ತೊಂದರೆ ನೀಡದ ಪರಿಣಾಮ ಸಮಸ್ಯೆ ಉದ್ಭವಿಸಿರಲಿಲ್ಲ. ಆದರೆ ಇತ್ತೀಚೆಗೆ ಗ್ರಾಮದೇವರಿಗೆ ಹೊಸದಾಗಿ ಗುಡಿ ನಿರ್ಮಿಸಲು ಮುಂದಾದ ವೇಳೆ ಸಮಸ್ಯೆ ಬಿಗಡಾಯಿಸಿದೆ. ಗುಡಿ ನಿರ್ಮಾಣಕ್ಕೆ ಅವಕಾಶ ನೀಡದೆ ಇಡೀ ಗ್ರಾಮ ನಮಗೆ ಸೇರುತ್ತಿದೆ ಎಂದು ಗ್ರಾಮದ ಕೆಲವರು ತೊಂದರೆ ನೀಡುತ್ತಿದ್ದು, ಹೊಸದಾಗಿ ಯಾವುದೇ ನಿರ್ಮಾಣ ಕಾರ್ಯಕ್ಕೂ ಅವಕಾಶ ನೀಡುತ್ತಿಲ್ಲ. ಸಂಚರಿಸುವ ರಸ್ತೆಗೆ ಅಡ್ಡಿಪಡಿಸಲಾಗುತ್ತಿದೆ. ರಾತ್ರಿ ವೇಳೆ ಮನೆ ಮೇಲೆ ಕಲ್ಲು ಬೀಳುತ್ತಿವೆ. ದಯವಿಟ್ಟು ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾಧಿಕಾರಿ ಬಳಿ ಗ್ರಾಮಸ್ಥರು ಮನವಿ ಮಾಡಿದರು.

ಈ ವೇಳೆ ದಾಖಲೆಗಳನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ರಾಜೇಶ್ ಅವರಿಗೆ ಡಿಸಿ ಸೂಚಿಸಿದರು.

ತಹಸೀಲ್ದಾರ್ ಸುಪ್ರೀತಾ, ಗ್ರಾಮದ ಮುಖಂಡ ರಥನ್, ರಾಮಚಂದ್ರೇಗೌಡ , ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net