

ಅರಕಲಗೂಡು: ಪಟ್ಟಣದ ಶಿಕ್ಷಕರ ಭವನದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅಧಿಕಾರಿಗಳ ವಿರುದ್ಧ ಗರಂ ಆದರು.
ಅರಕಲಗೂಡಿನಲ್ಲಿ ಬುಧವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಉದ್ಘಾಟಿಸಿದರಲ್ಲದೆ, ಜನಸಾಮಾನ್ಯರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿದರು.
ಈ ವೇಳೆ ಬಹಳಷ್ಟು ಅರ್ಜಿಗಳು ರಸ್ತೆ ತೆರವು, ಪಹಣಿ ತಿದ್ದುಪಡಿ, ಪೌತಿ ಖಾತೆ, ಪೋಡ್ ಮಾಡುವುದು ಇಂತಹುದೇ ಸಮಸ್ಯೆಗಳು ಪುನರಾವರ್ತನೆಯಾದಾಗ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ತಹಸೀಲ್ದಾರ್ ವಿರುದ್ಧ ಹರಿಹಾಯ್ದರು. ನಿಮ್ಮ ವ್ಯಾಪ್ತಿಯಲ್ಲೆ ಬಗೆಹರಿಸಬಹುದಾದ ಬಹಳಷ್ಟು ಸಮಸ್ಯೆಗಳಿವೆ, ಆದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ 15 ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಎಚ್‌ಆರ್‌ಪಿ, ದರಖಾಸ್ತು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಭೂಮಿ ಮಂಜೂರಾದವರಿಗೆ ನಮೂನೆ 1ರಿಂದ 5 ಆಂದೋಲನ ನಡೆಸುತ್ತಿದ್ದು ದಾಖಲೆಗಳನ್ನು ಪರಿಶೀಲಿಸಿ ಮಂಜೂರಾತಿಯನ್ನು ಕ್ರಮ ಬದ್ಧಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಎಚ್‌ಆರ್‌ಪಿ ಭೂ ಮಂಜೂರಾತಿಯಲ್ಲಿ ಆಗಿರುವ ಹಗರಣಗಳ ಬಗ್ಗೆ ಅರಿವಿದೆ, 997 ಬೋಗಸ್ ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ ಎಂದರು.
ರಾಮನಾಥಪುರ ಡಿಪೋದಲ್ಲಿ ಬಸ್‌ಗಳು ಕೊಣನೂರಿಗೆ ಹೋಗಿ ಬರಬೇಕು ಎಂಬ ನಿಯಮ ಇದ್ದರೂ ಪ್ರಯಾಣಿಕರನ್ನು ರಾಮನಾಥಪುರದಲ್ಲೆ ಇಳಿಸುತ್ತಿವೆ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಡಿಪೋ ವ್ಯವಸ್ಥಾಪಕರು ಪ್ರಯಾಣಿಕರ ಸಮಸ್ಯೆಗಳಿಗೆ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಂದಿಸಿದ ಶಾಸಕ ಎ.ಮಂಜು ಡಿಪೋ ವ್ಯವಸ್ಥಾಪಕ ಕೃಷ್ಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಸರಿಪಡಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಶಾಲಾ-ಕಾಲೇಜುಗಳ ಬಳಿ ಬಸ್ ನಿಲುಗಡೆ ನೀಡುವಂತೆ ಸೂಚಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಹೆರಿಗೆ ನಡೆಸದೆ ಹಾಸನ, ಹೊಳೆನರಸೀಪುರಕ್ಕೆ ಕಳುಹಿಸಲಾಗುತ್ತಿದೆ ಎಂದು ದಸಂಸ ಮುಖಂಡರು ದೂರಿದರು. ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಕೊಣನೂರು ಗ್ರಾಪಂ ಪೌರಕಾರ್ಮಿಕರು ವಾಸಿಸುತ್ತಿರುವ ಮನೆಗಳಿಗೆ ಇ ಸ್ವತ್ತು ಮಾಡಿಕೊಡದೆ ಸತಾಯಿಸುತ್ತಿರುವ ಕುರಿತು ಬಂದ ದೂರಿಗೆ 20 ದಿನದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ತಾಪಂ ಇಒಗೆ ಸೂಚಿಸಿದರು.
ಸಾರ್ವಜನಿಕರಿಂದ ಬಂದ ಎಲ್ಲ ಅರ್ಜಿಗಳ ಕುರಿತು ಪರಿಶೀಲಿಸಿ ಪರಿಹಾರ ದೊರಕಿಸಿಕೊಡುವುದಾಗಿ ಜಿಲ್ಲಾಧಿಕಾರಿ ಸತ್ಯಭಾಮಾ ತಿಳಿಸಿದರು.
ವಿವಿಧ ಇಲಾಖೆ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಎಡಿಸಿ ಕೆ.ಟಿ.ಶಾಂತಲಾ, ಎಎಸ್.ಪಿ.ಮಹಮದ್ ಸುಜೀತಾ, ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ, ತಾಲೂಕು ಕಚೇರಿ ಶಿರಸ್ತೇದಾರ್ ಸಿ.ಸ್ವಾಮಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.