

ನಾಗಮಂಗಲ: ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್ ಗುರುವಾರ ದಿಢೀರ್ ಭೇಟಿ ನೀಡಿ ಹಾಸ್ಟೆಲ್‌ನಲ್ಲಿರುವ ಮೂಲ ಸೌಲಭ್ಯಗಳು ಹಾಗೂ ಊಟದ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.
ಹಾಸ್ಟೇಲ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ವಿದ್ಯಾರ್ಥಿನಿಯರಿಂದ ಹಾಸ್ಟೆಲ್‌ನಲ್ಲಿನ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದು, ಹಾಸ್ಟೆಲ್‌ನಲ್ಲಿ ಯಾವುದೇ ರೀತಿಯ ತೊಂದರೆಗಳಿದ್ದರೆ ತಿಳಿಸುವಂತೆ ಸೂಚಿಸಿದರು. ಹಾಸ್ಟೆಲ್‌ನಲ್ಲಿನ ಕೊಠಡಿಗಳು, ಶೌಚಗೃಹ, ಅಡುಗೆ ಮನೆಗೆ ಭೇಟಿ ನೀಡಿ ಸ್ವಚ್ಛತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದರು. ನಂತರ ಊಟದ ವ್ಯವಸ್ಥೆ ಹಾಗೂ ಗುಣಮಟ್ಟವನ್ನು ತಿಳಿಯುವ ಸಲುವಾಗಿ ವಿದ್ಯಾರ್ಥಿಗಳೊಂದಿಗೆ ಖುದ್ದು ಡಿಸಿ ಮಧ್ಯಾಹ್ನದ ಊಟ ಸೇವಿಸಿದರು. ಈ ಸಂದರ್ಭ ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಅನುಕೂಲವಾಗುವಂತಹ ಪುಸ್ತಕಗಳನ್ನು ಒದಗಿಸುವ ಜತೆಗೆ ಓದಲು ಟೇಬಲ್ ಮತ್ತು ಚೇರ್‌ಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಚೇರಿಗೆ ಭೇಟಿ: ಪಟ್ಟಣದ ತಾಲೂಕು ಆಡಳಿತಸೌಧಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್ ದಿಢೀರ್ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ನಂತರ ನ್ಯಾಯಾಲಯದ ಸಭಾಂಗಣದಲ್ಲಿ ಸಾರ್ವಜನಿಕರಿಂದ ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸಿ ನಿಯಮಾನುಸಾರ ನಿಗದಿತ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಆಡಳಿತಸೌಧದ ಸಿಬ್ಬಂದಿಯೊಂದಿಗೆ ಕಚೇರಿ ಕೆಲಸ ನಿರ್ವಹಣೆ ಕುರಿತಂತೆ ವಿಭಾಗವಾರು ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಆದರ್ಶ್, ರಾಜಸ್ವ ನಿರೀಕ್ಷಕರಾದ ಮಂಜುನಾಥ್ ಮಧುಸೂದನ್, ಶಿರಸ್ತೇದಾರ್ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಇತರರು ಇದ್ದರು.