ಬಿಸಿಯೂಟ ಪರಿಶೀಲಿಸಿದ ಡಿಸಿ

Published on

ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಬಿಸಿಯೂಟದ ಗುಣಮಟ್ಟ ಪರಿಶೀಲಿಸಿದರು.

ತಾಲೂಕಿನ ಗೊರೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಶಾಲಾ ಮಕ್ಕಳ ಜತೆ ಸರದಿ ಸಾಲಿನಲ್ಲಿ ಕುಳಿತು ಊಟದ ಗುಣಮಟ್ಟ ಪರೀಕ್ಷಿಸಿದರು.

ಹೇಗಿದೆ ಊಟ, ಹಾಲು ಚೆನ್ನಾಗಿದೆಯಾ, ಗುಣಮಟ್ಟದ ಊಟ ಕೊಡುತ್ತಿದ್ದಾರಾ ಎಂದು ಮಕ್ಕಳಿಂದ ಮಾಹಿತಿ ಪಡೆದುಕೊಂಡರು. ಇವರು ನಮ್ಮ ಜಿಲ್ಲಾಧಿಕಾರಿ ಎಂಬುದನ್ನು ತಿಳಿಯದ ಮಕ್ಕಳು ಇರುವುದನ್ನು ವಿವರಿಸಿದರು.

ತುಂತುರು ಮಳೆ ನಡುವೆಯೂ ಡಿಸಿ ಅವರ ದಿಢೀರ್ ಭೇಟಿಯಿಂದ ಶಾಲಾ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ದಂಗಾದರು. ಇದೇ ವೇಳೆ ಮಕ್ಕಳಿಗೆ ಉತ್ತಮ ರೀತಿಯ ಆಹಾರ ನೀಡಿ ಎಂದು ಶಿಕ್ಷಕರು-ಸಿಬ್ಬಂದಿಗೆ ಸೂಚಿಸಿದರು.

ಡಿಸಿ ಅವರ ಈ ಕಾಳಜಿ ಹಾಗೂ ಆಡಳಿತ ವೈಖರಿಗೆ ಸ್ಥಳೀಯರು ಹಾಗೂ ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಸಿಯೂಟ ಯೋಜನೆಯಡಿ ಸರ್ಕಾರ, ಶಾಲಾ ಮಕ್ಕಳಿಗೆ ನೀಡುವ ಆಹಾರ ಸಾಮಗ್ರಿ ದುರ್ಬಳಕೆ ಆಗುತ್ತಿವೆ, ಗುಣಮಟ್ಟ ಹಾಗೂ ರುಚಿಕರವಾದ ಊಟ ಕೊಡುತ್ತಿಲ್ಲ ಎಂಬ ಆರೋಪ ಅನೇಕ ಕಡೆ ಇದೆ. ಡಿಸಿ ಅವರು ಹೀಗೆ ದಿಢೀರ್ ಭೇಟಿ ನೀಡುವುದನ್ನು ಮುಂದುವರಿಸಿದರೆ ಎಲ್ಲ ಲೋಪದೋಷ ಇಲ್ಲವಾಗಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ರುಚಿಕರ ಊಟ ಸಿಗಲಿದೆ ಎಂಬುದು ಆಶಯ ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net